ರಸ್ತೆ ಗುಂಡಿಗೆ ಪೊಲೀಸ್ ಮುಖ್ಯಪೇದೆ ಪುತ್ರನ ಬಲಿ

Prasthutha|

ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ನಡೆದ ಅಪಘಾತದಲ್ಲಿ ಪೊಲೀಸ್ ಮುಖ್ಯಪೇದೆಯೊಬ್ಬರ ಪುತ್ರ ಸಾವನ್ನಪ್ಪಿದ ದಾರುಣ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ.

- Advertisement -

ಹಿಂದೆ ಕೆ.ಆರ್.ಪುರ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸಿ ವಾರದ ಹಿಂದಷ್ಟೇ ಬೇರೆ ಠಾಣೆಗೆ ವರ್ಗಾವಣೆಗೊಂಡಿದ್ದ ಮುಖ್ಯ ಪೇದೆ ಸಂತೋಷ್ ಅವರ ಪುತ್ರ ಜೀವನ್ (10) ಮೃತ ಬಾಲಕ. ಮಗನ ಜೊತೆ ಬೈಕ್ ನಲ್ಲಿ ಕೆ.ಆರ್.ಪುರದ ಮಾರ್ಕೆಟ್ ಗೆ ನಿನ್ನೆ ಸಂಜೆ ಸಂತೋಷ್ ಹೋಗುತ್ತಿದ್ದರು.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-44 ಹದಗೆಟ್ಟಿದ್ದು, ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗಿತ್ತು. ಆದರೂ ರಸ್ತೆ ದುರಸ್ತಿ ಆಗಿರಲಿಲ್ಲ. ಇನ್ನು ರಸ್ತೆಯಲ್ಲಿ ಪುಡಿ ಜಲ್ಲಿ ಬಂದು ಸೇರಿತ್ತು. ಸಂತೋಷ್ ಅವರಿಗೆ ಕೆ.ಆರ್.ಪುರದ ತೂಗು ಸೇತುವೆಯನ್ನು ಇಳಿದ ತಕ್ಷಣ ರಸ್ತೆ ಗುಂಡಿ ಎದುರಾಗಿದೆ. ಈ ವೇಳೆ ಅವರು ಬೈಕನ್ನು ಬದಿಗೆ ಸರಿಸಿದ್ದಾರೆ. ಈ ವೇಳೆ ಪುಡಿ ಜಲ್ಲಿಯಿಂದಾಗಿ ಬೈಕ್ ಜಾರಿದೆ. ಆಗ ಹಿಂಬದಿ ಕುಳಿತ್ತಿದ್ದ ಬಾಲಕ ಜೀವನ್ ಆಯ ತಪ್ಪಿ ರಸ್ತೆಗೆ ಬಿದ್ದಿದ್ದಾನೆ.

- Advertisement -

ಬಾಲಕನ ರಸ್ತೆಗೆ ಬೀಳುತ್ತಿದ್ದಂತೆ ಹಿಂದೆಯಿಂದ ಬಂದ ಭಾರತೀಯ ಸೇನೆಗೆ ಸೇರಿದ ವಾಹನದ ಹಿಂಬದಿ ಚಕ್ರವು ಬಾಲಕನ ಮೇಲೆ ಹರಿದಿದೆ. ಇದರಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಾಲಕನ ಮೃತದೇಹವನ್ನು ಕೆ.ಆರ್ಪುರ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಕೆ.ಆರ್.ಪುರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ, ಸೇನೆಯ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಅಪಘಾತಕ್ಕೆ ಹದಗೆಟ್ಟರಸ್ತೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp