ಮುರುಘಾ ಶ್ರೀಗಳಿಗೆ ಪೊಲೀಸ್ ಡ್ರಿಲ್; ಬಾಲಕಿಯರ ಲೈಂಗಿಕ ದೌರ್ಜನ್ಯದ ಹೇಳಿಕೆಯಿಟ್ಟುಕೊಂಡು ಪ್ರಶ್ನೆ

Prasthutha|

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಮಠದ ಶಿವಮೂರ್ತಿ  ಸ್ವಾಮಿಯನ್ನು ಪೊಲೀಸರು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಿ ಪ್ರಕರಣದ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.

- Advertisement -

ವಿಚಾರಣೆ ನಡೆಸುವ ಸ್ಥಳ ಗೊತ್ತಾದರೆ ಭಕ್ತರು,ಅಭಿಮಾನಿಗಳು ಧಾವಿಸಿ ಗೊಂದಲ ಉಂಟಾಗುವ ಹಿನ್ನೆಲೆಯಲ್ಲಿ ರಹಸ್ಯ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಖುದ್ದಾಗಿ‌ ನಿನ್ನೆ ಸಂಜೆ ಹಾಜರಾದ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಸ್ವಾಮಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು.  ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ. ಕೋಮಲಾ ಅವರು  ಸೆ‌.5 ರವರೆಗೆ ಪೊಲೀಸ್‌ ವಶಕ್ಕೆ ನೀಡಿದ್ದರು.

- Advertisement -

ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿಗೆ ಕರೆದೊಯ್ಯಲು ಕಾರಾಗೃಹದ ಅಧೀಕ್ಷಕರು ಸಿದ್ಧತೆ ನಡೆಸಿದ್ದಕ್ಕೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ  ಸ್ವಾಮಿಯನ್ನು ವಶಕ್ಕೆ ತೆಗೆದುಕೊಂಡು ಡಿವೈಎಸ್‌ಪಿ ಕಚೇರಿಗೆ ಕರೆದೊಯ್ದು ಅಲ್ಲಿಂದ ‌ರಹಸ್ಯ ಸ್ಥಳಕ್ಕೆ ‌ಕರೆದುಕೊಂಡು ಹೋಗಿ ವಿಚಾರಣೆ  ಮುಂದುವರಿಸಲಾಗಿದೆ.

ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ತಜ್ಞ ವೈದ್ಯರನ್ನು ವಿಚಾರಣಾ ಕೊಠಡಿಯ ಬಳಿಯೇ ಇರಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಾರಕ್ಕೆ  ಒಬ್ಬರಂತೆ  ಹೆಣ್ಣು ಮಕ್ಕಳನ್ನು ಹಣ್ಣು ಹಂಪಲು ನೀಡಲು ಸ್ವಾಮಿಯ ಕೋಣೆಗೆ ಕಳಿಸಲಾಗುತ್ತಿತ್ತು. ಅಲ್ಲಿ ಸ್ವಾಮಿಯು ಬಲವಂತವಾಗಿ ಹುಡುಗಿಯರ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದ ಆರೋಪದ ಬಗ್ಗೆ ಪ್ರಶ್ನಿಸಿ ತನಿಖಾಧಿಕಾರಿಗಳು ಹೇಳಿಕೆ ದಾಖಲಿಸಿದ್ದಾರೆ.

ಹಣ್ಣು ಕೊಡಲು ಬಂದ ಬಾಲಕಿಯರ ಮೇಲೆ ಲೈಂಗಿಕ ಕೃತ್ಯ ನಡೆಸಿದ ಬಳಿಕ ವಿದ್ಯಾರ್ಥಿನಿಯರಿಗೆ ಸ್ನಾನದ ಕೋಣೆಯಲ್ಲಿ ಸ್ನಾನ ಮಾಡಿ ಹೋಗುವಂತೆ ಹೇಳಿ ತಾನು ಸ್ವಚ್ಚಗೊಳಿಸಲು ಟಿಶ್ಯೂ ಉಪಯೋಗಿಸುತ್ತಿದ್ದರು ಎಂಬ ಆರೋಪದ ಬಗ್ಗೆಯೂ ಪ್ರಶ್ನಿಸಲಾಗಿದೆ.

ಪ್ರತಿನಿತ್ಯ ಒಂದು ಹುಡುಗಿಯನ್ನು ಆಪ್ತ ಸಹಾಯಕರು ಕರೆದುಕೊಂಡು ಹೋಗಿ ಶರಣರ ಜೊತೆ ಕೋಣೆಯಲ್ಲಿ ಕೂಡಿಹಾಕುತ್ತಿದ್ದು, ಹಲವಾರು ಬಾರಿ ಈ ರೀತಿ ನಡೆದ ನಂತರ ಅದರ ವಿಡಿಯೋಗಳನ್ನು ಕೂಡ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಶರಣರು ಅವರ ವಿರುದ್ಧದ ಯಾವುದೇ ವರದಿಯನ್ನು ಬಿತ್ತರಿಸದಂತೆ ಕೋರ್ಟ್‌ನಿಂದ ಆದೇಶ ಪಡೆದ ಬಗ್ಗೆ ಕೂಡ ಪ್ರಶ್ನಿಸಿ ಹೇಳಿಕೆ ಪಡೆಯಲಾಗಿದೆ.

ಈ‌ ನಡುವೆ ಕಳೆದ ಜುಲೈ 24ರಂದು ದೌರ್ಜನ್ಯದಿಂದ ಬೇಸತ್ತು ಬೆಂಗಳೂರಿಗೆ ಬಂದಿದ್ದ  ಬಾಲಕಿಯರನ್ನು ಹಾಸ್ಟೆಲ್ ನಿಂದ ಹೊರ ಹಾಕಲಾಗಿತ್ತು. ಅಲ್ಲಿಂದ ಬಂದ ಬಾಲಕಿಯರು ಬೆಂಗಳೂರು ಕಾಟನ್ ಪೇಟೆ ಪೊಲೀಸ್ ಠಾಣೆಗೆ ಹೋಗಿ  ಸ್ವಾಮೀಜಿಯವರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು  ದೂರು ದಾಖಲಿಸಿದ್ದರು.

 ಈ ಹಿನ್ನೆಲೆಯಲ್ಲಿ ದಾಖಲಿಸಲಾಗಿದ್ದ ಸೆಕ್ಷನ್ 164 ಅನ್ವಯ ನ್ಯಾಯಾಧೀಶರ ಮುಂದೆ  ನೀಡಿದ ಹೇಳಿಕೆ ಹಾಗೂ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಇಟ್ಟುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದ ಸ್ವಾಮಿಯನ್ನು ನಿನ್ನೆ ಸಂಜೆ 4.05ಕ್ಕೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು.



Join Whatsapp