INDIA ಪದ ಬಳಕೆಗಾಗಿ 26 ವಿರೋಧ ಪಕ್ಷಗಳ ವಿರುದ್ಧ ದೂರು ದಾಖಲು

Prasthutha|

ಹೊಸದಿಲ್ಲಿ: ಇಂಡಿಯಾ (INDIA) ಹೆಸರನ್ನು ಅಸಮರ್ಪಕವಾಗಿ ಬಳಸಿದ ಆರೋಪದ ಮೇಲೆ 26 ವಿರೋಧ ಪಕ್ಷಗಳ ವಿರುದ್ಧ ದೆಹಲಿಯ ಬರಾಖಂಬಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.

- Advertisement -

ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಮತ್ತು ಗುರುತಿಸುವುದಕ್ಕಾಗಿ ಈ ಹೆಸರನ್ನು ಬಳಸಲಾಗಿದೆ. ಹಾಗಾಗಿ ಮೈತ್ರಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರುದಾರ ಡಾ. ಅವಿನೀಶ್ ಮಿಶ್ರಾ ಒತ್ತಾಯಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಜಂಟಿ ಸಭೆಯ ನಂತರ 26 ವಿರೋಧ ಪಕ್ಷಗಳು ತಮ್ಮ ಮೈತ್ರಿಗೆ ‘ಇಂಡಿಯಾ’ (Indian National Developmental Inclusive Alliance) ಎಂಬ ಹೆಸರು ಘೋಷಿಸಿತ್ತು.

- Advertisement -

ಮೈತ್ರಿಯ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ ಡಾ.ಅವಿನೀಶ್ ಮಿಶ್ರಾ, ಚುನಾವಣೆಯಲ್ಲಿ ಅನಗತ್ಯವಾಗಿ ‘ಇಂಡಿಯಾ’ ಎಂಬ ಪದವನ್ನು ಬಳಸಲಾಗುತ್ತಿದ್ದು, ಜನರ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ ಪಕ್ಷಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 26 ರಾಜಕೀಯ ಪಕ್ಷಗಳು ದೇಶದ ಹೆಸರನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಲಾಂಛನಗಳ ಕಾಯಿದೆಯ ಸೆಕ್ಷನ್ 2(ಸಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಲಾಂಛನಗಳ ಕಾಯಿದೆಯ ಸೆಕ್ಷನ್ 5, ಲಾಂಛನಗಳ ಕಾಯಿದೆಯ ಸೆಕ್ಷನ್ 3 ರ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ₹ 500 ದಂಡವನ್ನು ವಿಧಿಸಲು ಅವಕಾಶ ನೀಡುತ್ತದೆ ಎಂದು ಎಎನ್ಐ ವರದಿ ಉಲ್ಲೇಖಿಸಿದೆ.

ಇಂದು ಬೆಳಗ್ಗೆ ಮಹಾರಾಷ್ಟ್ರ ಬಿಜೆಪಿ ನಾಯಕ ಅಶುತೋಷ್ ದುಬೆ ಕೂಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ‘ಇಂಡಿಯಾ’ ವನ್ನು ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು ಇದು ದೇಶದ ಘನತೆಗೆ ಅಗೌರವ ತಂದಿದೆ ಎಂದು ಹೇಳಿದ್ದಾರೆ.

“ಈ ವಿಷಯದಲ್ಲಿ ನಿಮ್ಮ ಮಧ್ಯಸ್ಥಿಕೆಯು ನಮ್ಮ ರಾಷ್ಟ್ರದ ಘನತೆಯನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ದೇಶ ನಿಂತಿರುವ ಪ್ರಜಾಪ್ರಭುತ್ವದ ತತ್ವಗಳನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ” ಎಂದು ಬಿಜೆಪಿ ನಾಯಕ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು 26 ವಿರೋಧ ಪಕ್ಷಗಳು ಮಂಗಳವಾರ ‘ಇಂಡಿಯಾ’ ಎಂಬ ಮೈತ್ರಿಕೂಟ ರಚಿಸಿದೆ.

26 ವಿರೋಧ ಪಕ್ಷಗಳು- ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿ(ಯು), ಆರ್‌ಜೆಡಿ, ಜೆಎಂಎಂ, ಎನ್‌ಸಿಪಿ (ಶರದ್ ಪವಾರ್), ಶಿವಸೇನಾ (ಯುಬಿಟಿ), ಎಸ್‌ಪಿ, ಎನ್‌ಸಿ, ಪಿಡಿಪಿ, ಸಿಪಿಐ(ಎಂ), ಸಿಪಿಐ, ಆರ್‌ಎಲ್‌ಡಿ , ಎಂಡಿಎಂಕೆ, ಕೊಂಗುನಾಡು ಮಕ್ಕಳ್ ದೇಶಿಯಾ ಕಚ್ಚಿ (KMDK), ವಿಸಿಕೆ, ಆರ್​ಎಸ್​​ಪಿ, ಸಿಪಿಐ- ಎಂಎಲ್ (ಲಿಬರೇಶನ್), ಫಾರ್ವರ್ಡ್ ಬ್ಲಾಕ್, ಐಯುಎಂಲ್, ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಮಾಣಿ), ಅಪ್ನಾ ದಳ (ಕಾಮೆರವಾಡಿ), ಮತ್ತು ಮನಿತಾನೇಯ ಮಕ್ಕಳ್ ಕಚ್ಚಿ (ಎಂಎಂಕೆ).



Join Whatsapp