ಮಧ್ಯರಾತ್ರಿ ರೈತರ ಮನೆಗಳಿಗೆ ನುಗ್ಗಿ ಕ್ರೌರ್ಯ ಮೆರೆದ ಪೊಲೀಸರು; ವೀಡಿಯೋ ವೈರಲ್

Prasthutha|

ಪಾಟ್ನಾ: ಮಧ್ಯರಾತ್ರಿ ರೈತರ ಮನೆಗಳಿಗೆ ನುಗ್ಗಿದ ಪೊಲೀಸರು ನಿದ್ದೆಯಲ್ಲಿದ್ದ ರೈತರ ಮೇಲೆ ಮನಬಂದಂತೆ ಥಳಿಸಿದ ಘಟನೆ ಬಿಹಾರದ ಬುಕ್ಸಾರ್ ಜಿಲ್ಲೆಯ ಬನಾರ್ ಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

- Advertisement -

ಜಿಲ್ಲೆಯ ಚೌಸಾ ಬ್ಲಾಕ್ನಲ್ಲಿ ಸರ್ಕಾರಿ ಸ್ವಾಮ್ಯದ ಜಲವಿದ್ಯುತ್ ಕಂಪನಿ ಸ್ವಾಧೀನಪಡಿಸಿಕೊಂಡಿರುವ ತಮ್ಮ ಭೂಮಿಗೆ ಉತ್ತಮ ದರ ನೀಡುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಬನಾರ್ ಪುರ ಗ್ರಾಮದ ನಿವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ.


ರೈತರೇ ನಮ್ಮ ಮೇಲೆ ಮೊದಲು ಹಲ್ಲೆ ನಡೆಸಿದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಆದರೆ, ಅದನ್ನು ತಿರಸ್ಕರಿಸಿರುವ ರೈತರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಳಿ ಮಾಡುವ ಮುನ್ನ ಪೊಲೀಸರ ಗುಂಪು ಮನೆಯೊಂದರ ಹೊರಗೆ ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ.

- Advertisement -


ಮನೆಯೊಂದರಲ್ಲಿ ದಾಳಿಗೆ ಒಳಗಾದವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ಪೊಲೀಸರು ಮಹಿಳೆಯರು ಸೇರಿದಂತೆ ಜನರನ್ನು ನಿರ್ದಯವಾಗಿ ಥಳಿಸುವುದನ್ನು ಮತ್ತು ಬಾಗಿಲುಗಳನ್ನು ಒಡೆಯುವುದನ್ನು ಕಾಣಬಹುದಾಗಿದೆ. ಎಸ್ ಜೆವಿಎನ್ ವಿದ್ಯುತ್ ಸ್ಥಾವರ ಸಂಸ್ಥೆ ನೀಡಿದ ದೂರಿನ ಮೇರೆಗೆ ಮುಫಾಸಿಲ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ರೈತರು ಆರೋಪ ಮಾಡಿದ್ದಾರೆ.
ಮಧ್ಯರಾತ್ರಿ ಮನೆಗಳಿಗೆ ಪ್ರವೇಶಿಸಿದ ಬಗ್ಗೆ ಪ್ರಶ್ನಿಸಿದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾವು ಕಂಪನಿಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ನಮ್ಮ ಮೇಲೆ ದಾಳಿ ಮಾಡಿ ದೌರ್ಜನ್ಯ ಮೆರೆದಿದ್ದಾರೆ ಎಂದು ರೈತರು ದೂರಿದ್ದಾರೆ.

Join Whatsapp