1 ಕೋಟಿ ಮೌಲ್ಯದ ಚಿನ್ನದ ಗಟ್ಟಿ ದೋಚಿ ಸಿಕ್ಕಿಬಿದ್ದ ಪೊಲೀಸರು !

Prasthutha|

ಬೆಂಗಳೂರು: ರೈಲ್ವೆ ಪೊಲೀಸ್ ಸಿಬ್ಬಂದಿಯೇ ಸಂಚು ರೂಪಿಸಿ ಚಿನ್ನ ಖರೀದಿಸಿ ವಾಪಸ್ ಆಗುತ್ತಿದ್ದವರನ್ನು ಬೆದರಿಸಿ 1 ಕೋಟಿ 12 ಲಕ್ಷ ರೂ ಮೌಲ್ಯದ ಚಿನ್ನದ ಗಟ್ಟಿ ಕಸಿದು ಪರಾರಿಯಾಗಿರುವುದು ಪಶ್ಚಿಮ ವಿಭಾಗದ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

- Advertisement -


ಕೃತ್ಯ ನಡೆಸಿದ ಸಂಬಂಧಿಸಿದಂತೆ ರೈಲ್ವೆ ಪೊಲೀಸ್ ಕಾನ್ಸ್’ಟೇಬಲ್’ಗಳಾದ ಜ್ಞಾನೇಶ್ ಹಾಗೂ ವಟಾವಟಿಯನ್ನು ಉಪ್ಪಾರಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಮೆಜೆಸ್ಟಿಕ್ ಸಮೀಪದ ಆನಂದ ರಾವ್ ಸರ್ಕಲ್ ಬಳಿ ಅಬ್ದುಲ್ ರಝಾಕ್ ಹಾಗೂ ಮಲ್ಲಯ್ಯ ಎಂಬವರನ್ನು ತಡೆದು ಬೆದರಿಸಿದ್ದ ಆರೋಪಿಗಳು ಅವರ ಬಳಿಯಿದ್ದ ಚಿನ್ನದ ಗಟ್ಟಿ ಪಡೆದುಕೊಂಡು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿ ಪರಾರಿಯಾಗಿದ್ದು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಯಚೂರಿನ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಝಾಕ್ ಹಾಗೂ ಮಲ್ಲಯ್ಯ, ಅಂಗಡಿ ಮಾಲೀಕರ ಸೂಚನೆಯಂತೆ ಬೆಂಗಳೂರಿಗೆ ಬಂದು ಚಿನ್ನ ಖರೀದಿ ಮಾಡಿದ್ದರು. ವಾಪಸ್ ರಾಯಚೂರಿಗೆ ತೆರಳಲು ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಬಂದ ಆರೋಪಿಗಳು, ತಾವು ಪೊಲೀಸರೆಂದು ಪರಿಚಯಿಸಿಕೊಂಡು ಬಳಿಕ ಬ್ಯಾಗ್’ನಲ್ಲಿದ್ದ ಚಿನ್ನ ಕಸಿದುಕೊಂಡು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಬನ್ನಿ ಎಂದು ತಿಳಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು.


ಆರೋಪಿಗಳ ಸೂಚನೆಯಂತೆ, ಉಪ್ಪಾರ ಪೇಟೆ ಠಾಣೆಗೆ ಅಬ್ದುಲ್ ರಝಾಕ್ ಹಾಗೂ ಮಲ್ಲಯ್ಯ ತೆರಳಿ ವಿಚಾರಿಸಿದಾಗ ಆರೋಪಿಗಳು ಉಪ್ಪಾರಪೇಟೆ ಠಾಣೆಯ ಸಿಬ್ಬಂದಿಯಲ್ಲ ಎಂಬುದು ಬಯಲಾಗಿತ್ತು. ಘಟನೆಯ ಕುರಿತು ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಇಬ್ಬರು ರೈಲ್ವೆ ಕಾನ್ಸ್’ಟೇಬಲ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು 2019ರ ಬ್ಯಾಚ್ ಸಿಬ್ಬಂದಿ ಎಂದು ತಿಳಿದು ಬಂದಿದೆ.



Join Whatsapp