20 ವರ್ಷ ಹಿಂದೆ ಮೃತನಾದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

Prasthutha|

ಹೊಸದಿಲ್ಲಿ: ಮೃತನಾಗಿ ಇಪ್ಪತ್ತು ವರ್ಷ ಕಳೆದು ಜೀವಂತವಾಗಿ ಪೊಲೀಸರ ಅತಿಥಿಯಾದ ವಿಚಿತ್ರ ಘಟನೆ ದೇಶದ ರಾಜಧಾನಿಯಲ್ಲಿ ನಡೆದಿದೆ. ಈಶಾನ್ಯ ದೆಹಲಿಯ ಬವಾನಾದಲ್ಲಿ 2004ರ ಮೇ ತಿಂಗಳಲ್ಲಿ ರಾಜೇಶ್ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಪತ್ನಿಯ ಪ್ರಿಯಕರ ಬಾಲೇಶ್ ಕುಮಾರ್ (43) ಕೊಲೆ ನಡೆಸಿದ್ದನು. ಬಾಲೇಶ್ ಕುಮಾರ್ ಭಾರತೀಯ ನೌಕಾಪಡೆಯಲ್ಲಿ ಸ್ಟಿವರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಈತನ ವಿರುದ್ಧ ಕೆಲ ಸಣ್ಣಪುಟ್ಟ ಪ್ರಕರಣಗಳೂ ದಾಖಲಾಗಿದ್ದವು. ಪ್ರಿಯತಮೆಯ ಪತಿಯನ್ನು ಕೊಲೆ ಮಾಡಿದ ಬಳಿಕ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸುತ್ತಿದ್ದಂತೆ ಆತ ಜೋಧಪುರಕ್ಕೆ ಪಲಾಯನ ಮಾಡಲು ಹೊರಟಿದ್ದ. ಆದರೆ ಚೋದಪುರಕ್ಕೆ ಲಾರಿಯನ್ನು ಚಲಾಯಿಸುತ್ತಿದ್ದಾಗ ಆತ ಮೃತನಾಗಿದ್ದಾನೆ ಎಂದು ವರದಿಯಾಗಿತ್ತು. ಲಾರಿಗೆ ಬೆಂಕಿ ಹತ್ತಿಕೊಂಡು ಆತ ಸಜೀವ ದಹನವಾಗಿದ್ದಾನೆ ಎಂದು ಪೊಲೀಸರು ಹತ್ಯೆ ಪ್ರಕರಣದ ತನಿಖೆ ಅಂತ್ಯಗೊಳಿಸಿದ್ದರು.

- Advertisement -

ಹತ್ಯೆ ಮಾಡಿದ ಇಪ್ಪತ್ತು ವರ್ಷಗಳ ಬಳಿಕ ಬಾಲೇಶ್ ಕುಮಾರ್ ಮೃತಪಟ್ಟಿಲ್ಲ ಎನ್ನುವ ಅಂಶ ಪೊಲೀಸರಿಗೆ ತಿಳಿದಾಗ ಷಾಕ್ ಆಗಿದೆ. ಟ್ರಕ್ನಲ್ಲಿ ಇಬ್ಬರು ಕಾರ್ಮಿಕರನ್ನು ಸುಟ್ಟುಹಾಕಿ ತಾನೇ ಬೆಂಕಿಗೆ ಆಹುತಿಯಾದ ಕಥೆ ಕಟ್ಟಿದ್ದ ಎನ್ನುವ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಬಾಲೇಶ್ ಕುಮಾರ್ ಜೀವಂತ ಇರುವುದು ಆತನ ಪತ್ನಿಗೆ ಗೊತ್ತಿತ್ತು. ಆದರೆ ಮರಣ ಪ್ರಯೋಜನ ಮತ್ತು ವಿಮಾ ಪರಿಹಾರವನ್ನು ಪಡೆದು, ಪತಿಯ ನೌಕಾಪಡೆ ಪಿಂಚಣಿಯಲ್ಲಿ 20 ವರ್ಷ ಕಾಲ ಜೀವನ ಸಾಗಿಸಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಾಲೇಶ್ ಕುಮಾರ್ ತನ್ನದೇ ಸಾವಿನ ಕಥೆ ಹೆಣೆದಿದ್ದನು. ಇಬ್ಬರು ಕೂಲಿ ಕಾರ್ಮಿಕರನ್ನು ಪಡೆದು ಅವರಿಗೆ ಮದ್ಯಪಾನ ಮಾಡಿಸಿ ಟ್ರಕ್ನಲ್ಲಿ ಕೂರಿಸಿ ಬೆಂಕಿ ಹಚ್ಚಿ ಅವರನ್ನು ಹತ್ಯೆ ಮಾಡಿದ್ದನು. ಬಳಿಕ ಸುಟ್ಟು ಕರಕಲಾಗಿದ್ದ ದೇಹ ತನ್ನದೇ ಎಮದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದನು. ಬೇರೆ ವ್ಯಕ್ತಿಯ ಹೆಸರಿನಲ್ಲಿ ಗುರುತಿನ ಚೀಟಿ ಪಡೆದು ಪ್ರತ್ಯೇಕವಾಗಿ ಜೀವಿಸುತ್ತಿದ್ದನು. ಕುಮಾರ್ ಅಮನ್ ಸಿಂಗ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್, ಪಾನ್ಕಾರ್ಡ್, ಚಾಲನಾ ಲೈಸನ್ಸ್ ಪಡೆದಿದ್ದನು. ಆತನ ಪತ್ನಿ ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿದ್ದಳು.

- Advertisement -

ಆದರೆ 2000ನೇ ಇಸವಿಯಲ್ಲಿ ಈತ ನಡೆಸಿದ್ದ ಸುಲಿಗೆ ಪ್ರಕರಣವೊಂದರ ವಿಚಾರಣೆ ನಡೆಸಿದಾಗ, ಈತನ ನಿಜ ಬಣ್ಣ ಬಯಲಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಆತನ ಪತ್ನಿ ತಲೆ ಮರೆಸಿಕೊಂಡಿದ್ದಾಳೆ. ಪತ್ನಿಗೆ ರಾಜೇಶ್ ಹತ್ಯೆಯ ವಿಷಯ ತಿಳಿದಿತ್ತು ಹಾಗೂ ಗಂಡನ ಚಲನ ವಲನಗಳ ಬಗ್ಗೆಯೂ ಅರಿವು ಇತ್ತು. ಆದರೂ ನೌಕಾಪಡೆ ಸಿಬ್ಬಂದಿಯ ಪತ್ನಿಯಾಗಿ ಪಿಂಚಣಿ ಪಡೆಯುತ್ತಿದ್ದಳು ಎಂದು ತನಿಖಾಧಿಕಾರಿ ಸಿಪಿ ಯಾದವ್ ಹೇಳಿದ್ದಾರೆ.