ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಇಂದು ಕಲಬುರಗಿಗೆ ಆಗಮಿಸಲಿದ್ದು, ಬೃಹತ್ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ ಮತ್ತು ಕೆಲವು ಪ್ರಶ್ನೆಗಳನ್ನು ಎಕ್ಸ್ ಪೋಸ್ಟ್ ಮೂಲಕ ಕೇಳಿದ್ದಾರೆ.
ಮಿಸ್ಟರ್ ಬಾಂಡ್ ನರೇಂದ್ರ ಮೋದಿ ಅವರಿಗೆ ಕಲಬುರಗಿಗೆ ಆತ್ಮೀಯ ಸ್ವಾಗತ.ಕಲಬುರಗಿ ಜನತೆಯ ಕೆಲವು ಪ್ರಶ್ನೆಗಳಿಗೆ ನೀವು ಉತ್ತರಿಸುವ ನಿರೀಕ್ಷೆಯಿದೆ ಎಂದ ಪ್ರಿಯಾಂಕ್ ಖರ್ಗೆ, ಕರ್ನಾಟಕದಲ್ಲಿ MGNREGA ಕಾರ್ಮಿಕರ ವೇತನ ಪಾವತಿಯನ್ನು ಕೇಂದ್ರ ಸರ್ಕಾರ ಏಕೆ ಬಿಡುಗಡೆ ಮಾಡುತ್ತಿಲ್ಲ? ಮೋದಿ ಸರ್ಕಾರ ದಿವಾಳಿಯಾಗಿದೆಯೇ?,ಕರ್ನಾಟಕದಲ್ಲಿ ಭೀಕರ ಬರ ಕಾಡುತ್ತಿದ್ದರೂ ಮೋದಿ ಸರ್ಕಾರ ಎನ್‌ಡಿಆರ್‌ಎಫ್ ಹಣ ಬಿಡುಗಡೆ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಪ್ರಿಯಾಂಕ್ ಖರ್ಗೆ, ಬಿಜೆಪಿ ಹಿಂದಿನ ಚುನಾವಣೆಗಳಲ್ಲಿ ನೀಡಿದ ಭರವಸೆಯಂತೆ ನೀವು ಯಾವಾಗ ಕೋಲಿ ಮತ್ತು ಗೊಂಡ ಕುರುಬ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಸೇರಿಸುತ್ತೀರಿ? ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದಿಸಿದ ಕಲಬುರ್ಗಿ ರೈಲ್ವೆ ವಿಭಾಗವನ್ನು ನಿಮ್ಮ ಸರ್ಕಾರ ಏಕೆ ಕೈಬಿಟ್ಟಿದೆ? ಕಲಬುರಗಿಯಲ್ಲಿ ರಾಷ್ಟ್ರೀಯೆ ಹೂಡಿಕೆ ತಯಾರಿಕಾ ವಲಯವನ್ನು ನಿಮ್ಮ ಸರ್ಕಾರ ಕೈಬಿಟ್ಟಿದ್ದು ಏಕೆ? ಕಲಬುರಗಿ ಒಆರ್‌ಆರ್‌ಗೆ ಏಕೆ ಅನುದಾನ ನೀಡಿಲ್ಲ ಎಂಬ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ‘#ಮೋದಿಮೋಸ’ ಎಂದು ಕೊನೆಗೆ ಬರೆದಿದ್ದಾರೆ.