ನವದೆಹಲಿ: ಟ್ವೀಟ್ ನಿಂದ ಮೋದಿಗೆ ನೋವಾಗಿದೆಯೇ ಹೊರತು 135 ಮುಗ್ಧ ಜನರ ಸಾವಿನಿಂದಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಕಲಿ ಟ್ವೀಟ್ ಮಾಡಿದ ಆರೋಪದ ಮೇಲೆ ಮೂರು ದಿನಗಳಲ್ಲಿ ಎರಡು ಬಾರಿ ಬಂಧಿಸಲ್ಪಟ್ಟಿರುವ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯ ನಿರ್ದೇಶನದ ಮೇರೆಗೆ 3 ದಿನಗಳಲ್ಲಿ ನನ್ನನ್ನು 2 ಸಲ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ನನಗೆ ಜಾಮೀನು ನೀಡಿ ನನ್ನ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದಕ್ಕಾಗಿ ಗೌರವಾನ್ವಿತ ನ್ಯಾಯಾಂಗಕ್ಕೆ ನಾನು ಆಭಾರಿಯಾಗಿದ್ದೇನೆ. ಮೋದಿಗೆ ಟ್ವೀಟ್ ನಿಂದ ನೋವಾಗಿದೆ. 135 ಮುಗ್ಧ ಜನರ ಸಾವಿನಿಂದಲ್ಲ” ಎಂದು ಗೋಖಲೆ ಲೇವಡಿಮಾಡಿದ್ದಾರೆ.
ಮೊದಲ ಪ್ರಕರಣದಲ್ಲಿ ಗೋಖಲೆಗೆ ಜಾಮೀನು ದೊರೆತ ನಂತರ ಅವರನ್ನು ಮತ್ತೆ ಬಂಧಿಸಲಾಗಿತ್ತು. ಅವರ ವಿರುದ್ಧ ಎರಡನೆ ದೂರು ದಾಖಲಿಸಿದ ಚುನಾವಣಾ ಆಯೋಗವನ್ನು “ಬಿಜೆಪಿ ಮೈತ್ರಿಪಕ್ಷ” ಎಂದು ಅವರು ಕಿಡಿ ಕಾರಿದ್ದಾರೆ.
ಮೆಟ್ರೊಪಾಲಿಟನ್ ನ್ಯಾಯಾಲಯ ಗುರುವಾರ ಗೋಖಲೆಗೆ ಜಾಮೀನು ನೀಡಿದ ಬೆನ್ನಲ್ಲೇ ಮೊರ್ಬಿ ದುರಂತದ ಬಗ್ಗೆ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದರು.