ನವದೆಹಲಿ: ಭಾರತೀಯ ಸೇನೆಯನ್ನು ಅಗ್ನಿಪಥ ಯೋಜನೆ ಮೂಲಕ ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡಂತೆಯೇ ಈ ಯೋಜನೆಯನ್ನು ವಾಪಸ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದೆ. ಹಾಗೆಯೇ ಕೃಷಿ ಕಾಯ್ದೆಗಳನ್ನು ಹಿಂಪಡೆದರು. ‘ಅಗ್ನಿಪಥ’ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಕೇಳುತ್ತಿದೆ. ಎಲ್ಲ ಯುವಕರು ನಮ್ಮ ಜೊತೆ ನಿಂತಿದ್ದಾರೆ’ ಎಂದು ರಾಹುಲ್ ಗಾಂಧಿ ಎಚ್ಚರಿಸಿದರು.
‘ಒಂದು ಶ್ರೇಣಿ, ಒಂದು ಪಿಂಚಣಿ’ ಎನ್ನುತ್ತಿದ್ದರು. ಈಗ ‘ಶ್ರೇಣಿಯೂ ಇಲ್ಲ, ಪಿಂಚಣಿಯೂ ಇಲ್ಲ’. ಒಂದೆಡೆ ಚೀನಾ ನಮ್ಮ ಭೂಪ್ರದೇಶದ ಮೇಲೆ ಕಣ್ಣಿಟ್ಟಿದೆ. ಇಂತಹ ಸಂದರ್ಭದಲ್ಲಿ ಸೇನೆಯನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರದ ಬಹುದೊಡ್ಡ ಸಮಸ್ಯೆ ಉದ್ಯೋಗ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನಷ್ಟವನ್ನುಂಟು ಮಾಡುವ ಮೂಲಕ ರಾಷ್ಟ್ರದ ಬೆನ್ನು ಮೂಳೆಯನ್ನು ಮುರಿಯಲಾಗಿದೆ. ಎರಡು-ಮೂರು ಜನ ಉದ್ಯಮಿಗಳ ಕೈಗೆ ದೇಶವನ್ನು ಕೊಟ್ಟಿದ್ದಾರೆ. ಕೊನೆಗೆ ಉದ್ಯೋಗದ ಭರವಸೆಯಂತಿದ್ದ ಸೇನೆಯ ಬಾಗಿಲನ್ನು ಮುಚ್ಚಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ವಿಚಾರಣೆ ವೇಳೆ ತಾನೊಬ್ಬ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬರು ತಮ್ಮ ಜೊತೆಗಿದ್ದರು ಎಂದ ರಾಹುಲ್ ಗಾಂಧಿ ತನ್ನನ್ನುಬೆಂಬಲಸಿದ ಪಕ್ಷದ ಕಾರ್ಯಕರ್ತರಿಗೆ ಇದೇ ಸಂದರ್ಭ ಧನ್ಯವಾದ ತಿಳಿಸಿದರು.