ಬೆಂಗಳೂರು: ಕರ್ನಾಟಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಆಮ್ ಆದ್ಮಿ ಪಾರ್ಟಿ ಹಾಕಿದ್ದ ಸವಾಲುಗಳನ್ನು ಸ್ವೀಕರಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿ.ಟಿ.ನಾಗಣ್ಣ, “ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿಯವರಿಗೆ ಐದು ಸವಾಲುಗಳನ್ನು ಎಎಪಿ ಹಾಕಿತ್ತು. 40% ಕಮಿಷನ್ ದಂಧೆ, ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವುದು, ರಾಜ್ಯಕ್ಕೆ ಜಿಎಸ್ ಟಿ ಬಾಕಿ ಉಳಿಸಿಕೊಂಡಿರುವುದು, ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡದಿರುವುದು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದರ ಬಗ್ಗೆ ಮಾತನಾಡಬೇಕೆಂದು ನಾವು ಸವಾಲು ಹಾಕಿದ್ದೆವು. ಆದರೆ ಪ್ರಧಾನಿ ಮೋದಿಯವರು ಐದು ಸವಾಲುಗಳ ಪೈಕಿ ನಾಲ್ಕರ ಬಗ್ಗೆ ತುಟಿ ಬಿಚ್ಚದೇ ಪಲಾಯನ ಮಾಡಿದ್ದಾರೆ” ಎಂದು ಹೇಳಿದರು.
“ರಾಜ್ಯದ ಎಂಟು ಲಕ್ಷ ಜನರಿಗೆ ಮನೆ ನಿರ್ಮಾಣ ಮಂಜೂರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಆದರೆ ಕೇವಲ ಮಂಜೂರು ಮಾಡಿ ಸುಮ್ಮನಾಗುವುದರಿಂದ ಏನು ಉಪಯೋಗ? ಎಷ್ಟು ಮನೆಗಳು ಪೂರ್ಣಗೊಂಡು ಅರ್ಹ ಫಲಾನುಭವಿಗಳಿಗೆ ಸಿಕ್ಕಿದೆ ಎಂಬ ಬಗ್ಗೆ ಪ್ರಧಾನಿಯವರು ಮಾತನಾಡಬೇಕಿತ್ತು. ರಾಜ್ಯ ಸರ್ಕಾರವಾದರೂ ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ. ನಮಗಿರುವ ಮಾಹಿತಿ ಪ್ರಕಾರ ಒಂದೇ ಒಂದು ಮನೆಯನ್ನೂ ಸೂಕ್ತ ರೀತಿಯಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ನೀಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ” ಎಂದು ಬಿ.ಟಿ.ನಾಗಣ್ಣ ಆರೋಪಿಸಿದರು.
“ಗುತ್ತಿಗೆ ಕಾಮಗಾರಿಗಳಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು 40% ಕಮಿಷನ್ ಪಡೆಯುತ್ತಿರುವುದಕ್ಕೆ ರಾಜ್ಯಾದ್ಯಂತ ಟೀಕೆ ವ್ಯಕ್ತವಾಗುತ್ತಿದೆ. ಗುತ್ತಿಗೆದಾರರ ಸಂಘಗಳ ಅಧ್ಯಕ್ಷರುಗಳೇ ಪ್ರಧಾನಿಯವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಆದರೂ ಕೂಡ ಪ್ರಧಾನಿಯವರು ಈ ಬಗ್ಗೆ ಏನನ್ನೂ ಮಾತನಾಡುವ ಧೈರ್ಯ ತೋರಿಲ್ಲ. ರಾಜ್ಯ ಸರ್ಕಾರದ ಕಮಿಷನ್ ದಂಧೆಗೆ ಮೋದಿಯವರು ರಕ್ಷಣೆ ನೀಡುತ್ತಿರುವುದು ಇದರಿಂದಲೇ ಸ್ಪಷ್ಟವಾಗುತ್ತದೆ” ಎಂದು ಬಿ.ಟಿ.ನಾಗಣ್ಣ ಹೇಳಿದರು.
“ಮನೆಗಳ ನಿರ್ಮಾಣ, ಜಲಜೀವನ್ ಮಿಷನ್, ಮುದ್ರಾ ಯೋಜನೆಗಳ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಆಗ ಮಾತ್ರ ಪ್ರಧಾನಿ ಮೋದಿಯವರ ಭಾಷಣದ ಸತ್ಯಾಸತ್ಯತೆ ಜನರಿಗೆ ತಿಳಿಯುತ್ತದೆ. ಯೋಜನೆಗಳನ್ನು ಜಾರಿಗೆ ತರದೇ ಕೇವಲ ಮಂಜೂರಾತಿ ಮಾಡಿ ಬಡಾಯಿ ಕೊಚ್ಚಿಕೊಳ್ಳುವುದು ಸರಿಯಲ್ಲ. ಇದು ಜನರನ್ನು ವಂಚಿಸುವ ತಂತ್ರ. ಸರ್ಕಾರಕ್ಕೆ ನೈತಿಕತೆಯಿದ್ದರೆ ಯೋಜನೆಗೆಳ ಕುರಿತು ಶೀಘ್ರವೇ ಶ್ವೇತಪತ್ರ ಬಿಡುಗಡೆ ಮಾಡಲಿ” ಎಂದು ಬಿ.ಟಿ.ನಾಗಣ್ಣ ಸವಾಲು ಹಾಕಿದರು.