ವಿಪಕ್ಷಗಳು ಒಂದಾಗಿರುವುದು ನೋಡಿ ಪ್ರಧಾನಿ ಮೋದಿ ಹೆದರಿದ್ದಾರೆ: ವಿ.ಎಸ್.ಉಗ್ರಪ್ಪ

Prasthutha|

ಬೆಂಗಳೂರು: ದೇಶದ ರಾಜಕೀಯ ಇತಿಹಾಸದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸುಮಾರು  28 ಪಕ್ಷಗಳು ಒಂದಾಗಿವೆ.ವಿಪಕ್ಷಗಳು ಒಂದಾಗಿರುವುದು ನೋಡಿ ಪ್ರಧಾನಿಗಳು ಹೆದರಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಸೋಲಾಗುವುದು ಗೋಡೆ ಬರಹದಷ್ಟೇ ಗ್ಯಾರಂಟಿ, ಸ್ಪಷ್ಟ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

- Advertisement -

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಕಿಲಾಡಿ ಮಹಾನ್ ಮೋದಿಯವರು ಹೆದರಿಕೊಂಡು ಒಂದಷ್ಟು ವರ್ಗದ ಜನರನ್ನು ಮರುಳು ಮಾಡಬಹುದು ಎಂದು  ಅವರೇ ಸಿಕ್ಕಾಪಟ್ಟೆ ಏರಿಸಿದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಕಡಿಮೆ ಮಾಡಿದ್ದಾರೆ ಎಂದರು.

2014 ರಲ್ಲಿ 395 ರೂಪಾಯಿ ಇತ್ತು ಅದನ್ನ 1200 ರ ತನಕ ತೆಗೆದುಕೊಂಡು ಹೋಗಿದ್ದು ಮೋದಿ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಗೆ 120 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ 40 ಡಾಲರ್‌ಗೆ ಇಳಿದಿತ್ತು. ಈಗ 100 ಡಾಲರ್ ಇದೆ. ಈ ಮಧ್ಯೆ ಬೆಲೆ ಇಳಿಕೆಯಾದಾಗ 30 ಲಕ್ಷ ಕೋಟಿ ಹಣ ತೆರಿಗೆ ರೂಪದಲ್ಲಿ ಬಂದಿದೆ. ಮೋದಿಯವರೇ ದಮ್ಮು, ತಾಕತ್ತು ಇದ್ದರೆ 2014 ರಲ್ಲಿ ಹೇಳಿದ್ರಿ ಬೆಲೆ ಇಳಿಕೆ ಮಾಡುತ್ತೇನೆ ಎಂದು ಈಗ ಮಾಡಿ‌ ಆ ಕೆಲಸವನ್ನು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ. 2014 ರಲ್ಲಿ ಇದ್ದ ಬೆಲೆಯನ್ನು ಈಗ ತನ್ನಿ ಎಂದರು.

- Advertisement -

ಇದ್ದಕ್ಕಿದ್ದಂತೆ ಒನ್ ನೇಷನ್ ಒನ್ ಎಲೆಕ್ಷನ್ ಹಾಗೂ ಮಹಿಳಾ ಮೀಸಲಾತಿ ತರುವ ಪ್ರಸ್ತಾಪ ತರುತ್ತೇವೆ ಎಂದು ಹೇಳಿದ್ದಾರೆ. ಬಿಜೆಪಿಯವರು ಮನುವಾದಿಗಳು ಎಂದಿಗೂ ಅವರು ಆದಿವಾಸಿ, ದಲಿತ, ಹಿಂದುಳಿದ, ಬಡವ, ಮಹಿಳಾ ಪರವಾಗಿ ಇರುವುದಿಲ್ಲ. ಮಹಿಳಾ ಮೀಸಲಾತಿ ಬಿಲ್ 1996 ರಿಂದ ಬಾಕಿ ಇದೆ, ಈಗ ಯಾಕೆ ಕಾಳಜಿ ಚುನಾವಣೆ ಹತ್ತಿರ ಇರುವಾಗ ಈ ನಾಟಕ ಏಕೆ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಮಹಿಳೆಯರ ಏಳಿಗೆಗೆ ಪೂರಕವಾಗಿರುವ 4 ಗ್ಯಾರಂಟಿ ಯೋಜನೆಗಳಿಗೆ ಹೆದರಿ ಈಗ ಎಚ್ಚರಗೊಂಡಿದ್ದಾರೆ. ಒಂದು ದೇಶ ಒಂದು ಚುನಾವಣೆ ಎಂದು ಹೇಳುವ ನೀವು ಕಳೆದ 9 ವರ್ಷ ಏನು ಮಾಡುತ್ತಿದ್ದೀರಿ, ಈಗ ಈ ಘೋಷಣೆ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದೀರಿ. ಕರ್ನಾಟಕದಲ್ಲಿ  ಚುನಾವಣೆ ನಡೆದು 3 ತಿಂಗಳಾಗಿದೆ, ಮುಂದಿನ 6 ತಿಂಗಳಿನಲ್ಲಿ 5 ರಾಜ್ಯಗಳ ಚುನಾವಣೆ ಇದೆ. ನೀವು ಈಗ ಒಂದು ಚುನಾವಣೆ ಎಂದು ಹೇಳಿ 5 ವರ್ಷಗಳಿಗೆ ಕೊಟ್ಟಿರುವ ಜನಾದೇಶವನ್ನು ಧಿಕ್ಕರಿಸುವ ದುರ್ಬುದ್ದಿ ಅಲ್ಲವೇ ಎಂದರು.

ಒಂದು ದೇಶ ಒಂದೇ ಚುನಾವಣೆಯಿಂದ ಏನು ಲಾಭ ನಿಮ್ಮ ಮುಖ ನೋಡಿ ಮತ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿ ಇದ್ದೀರಾ ಮೋದಿ? ಕರ್ನಾಟಕ ಚುನಾವಣೆ ವೇಳೆ 28 ಸಲ ಕರ್ನಾಟಕಕಕ್ಕೆ ಬಂದ್ರಿ, ಬೀದಿ, ಬೀದಿ ಅಲೆದಿರಿ ಏನಾಯಿತು ಹೀನಾಯ ಸೋಲು ಕಂಡಿತು ಬಿಜೆಪಿ. ಪಶ್ಚಿಮ ಬಂಗಾಳ, ತಮಿಳುನಾಡು, ಹರಿಯಾಣ ಇಲ್ಲೆಲ್ಲಾ ಸೋತಿದ್ದು ಏಕೆ? ಈ ದೇಶಕ್ಕೆ ರಾಷ್ಟ್ರೀಯ ನಾಯಕತ್ವ ಅಂದರೆ ಅದು ಇಂದಿರಾ ಗಾಂಧಿ ಅವರದ್ದು ಮಾತ್ರ, ಜನಪ್ರತಿನಿಧಿ ಕಾಯ್ದೆ 1950 ಮತ್ತು 51 ರ ಪ್ರಕಾರ 7 ದಿನ ನಾಮಪತ್ರ ಸಲ್ಲಿಸಲು 8 ಮತ್ತು 9 ನೇ ದಿನ ಪರಿಶೀಲನೆ 10 ನೇ ದಿನ ಹಿಂತೆಗತ, ನಂತರ 14 ದಿನ ಒಟ್ಟು 24 ದಿನಗಳು ಮತದಾನವಾಗಲು ಸಮಯವಿದೆ. ನಿಮಗೆ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು ಎನ್ನುವ ಮನಸ್ಸಿದ್ದರೆ ನಾಮಪತ್ರ ಹಾಕುವುದನ್ನು 2 ದಿನಕ್ಕೆ ಇಳಿಸಿ, ಒಂದು ದಿನ ಪರಿಶೀಲನೆ, 4 ನೇ ದಿನಕ್ಕೆ ಮತದಾನ ಮಾಡಿದರೆ ಚುನಾವಣಾ ಅಕ್ರಮಗಳೇ ನಡೆಯುವುದಿಲ್ಲ. ಇದನ್ನು ಮಾಡಲು ಆಗುವುದಿಲ್ಲವೇ ನಿಮಗೆ ಎಂದರು.

ಸೆಕ್ಷನ್ 82 ಕ್ಕೆ ತಿದ್ದುಪಡಿ ತರುವುದರ ಮೂಲಕ 2026 ರ ತನಕ ಯಾವುದೇ ಕ್ಷೇತ್ರ ಪುನರ್ ವಿಂಗಡಣೆ ಮಾಡಬಾರದು ಎನ್ನುವ ಕಾನೂನು ತಂದಿದ್ದು ನಿಮ್ಮದೇ ಬಿಜೆಪಿ ಸರ್ಕಾರ. 2011 ರ ಜನಗಣತಿ ಪ್ರಕಾರ ಕ್ಷೇತ್ರ ಪುನರ್ ವಿಂಗಡಣೆ ಆಗಿಲ್ಲ, ಈಗ ಜನಗಣತಿಯೂ ಆಗಿಲ್ಲ‌. ಅಂದರೆ ಈ ದೇಶದ ಬಡ ಜನರನ್ನು ಚುನಾವಣೆಯಿಂದ ದೂರ ಇಡುವ ಹುನ್ನಾರ. ಈ ದೇಶದಲ್ಲಿ ಐರನ್ ಲೆಗ್ ರಾಜಕಾರಣಿ ಅಂತ ಯಾರಾದರೂ ಇದ್ದರೆ ಅದು ಮೋದಿಯವರು, ಅವರು ಹೋದಲೆಲ್ಲಾ ಬಿಜೆಪಿಗೆ ಸೋಲು ಎಂದು ಹೇಳಿದ್ದಾರೆ.