ಬೆಂಗಳೂರು: ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಮೋದಿ ಸಹಿಸುತ್ತಿಲ್ಲ. ಹೇಗಾದರೂ ಮಾಡಿ ಸರ್ಕಾರಗಳನ್ನು ಬೀಳಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸುವುದು ಬಿಜೆಪಿಯ ಹುಟ್ಟುಗುಣ. ಜಾರ್ಖಂಡ್ ನಲ್ಲಿ ಸೇರಿ ಹಲವು ಕಡೆ ನಡೆಯುತ್ತಿರುವುದು ಇದೆ ಆಗಿದೆ. ತನಿಖಾ ಸಂಸ್ಥೆಗಳನ್ನು ಇದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಸಚಿವರು ಸ್ಪರ್ಧೆ ಮಾಡಿದರೆ ತಪ್ಪೇನು ? ಎಂದು ಮಾಧ್ಯಮಗಳ ಪ್ರಶ್ನೆಯನ್ನೇ ಪ್ರಶ್ನಿಸಿದ ಅವರು, ಕೆಲವು ಆಂತರಿಕ ಚರ್ಚೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಇದು ಹೈಕಮಾಂಡ್ ನಿರ್ಧಾರ ಅವರ ತೀರ್ಮಾನಕ್ಕೆ ಎಲ್ಲರೂ ಬದ್ದ. ಅವರು ಹೇಳಿದಾಗ ಸ್ಪರ್ಧೆ ಮಾಡಲೇ ಬೇಕು. ಇದು ಒಳ್ಳೆಯ ಬೆಳವಣಿಗೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ದೇಶ ಒಡೆಯುವ ಮನಸ್ಥಿತಿಯಲ್ಲೇ ಇದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಗರಂ ಆದ ಅವರು, ಬಿಜೆಪಿ ಯಾವತ್ತೂ ದೇಶ ಕಟ್ಟುವ ಕೆಲಸ ಮಾಡಿಲ್ಲ. ಬ್ರಿಟಿಷರ್ ವಿರುದ್ದ ಕಾಂಗ್ರೆಸ್ ಹೋರಾಡಿದಾಗ ಹಿಂದೂ ಮಹಾಸಭಾ ಬ್ರಿಟಿಷ್ ಹತ್ತಿರ ಇತ್ತು. ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದು ನಾವೇ, ಅದನ್ನು ಹೊರತುಪಡಿಸಿ ಎಲ್ಲವನ್ನೂ ಒಗ್ಗೂಡಿಸಿದ್ದೇವೆ ಎಂದರು. ಆರ್ ಎಸ್ ಎಸ್, ಹಿಂದೂ ಮಹಾಸಭಾ ಎಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರು ದೇಶ ಭಕ್ತರಲ್ಲ ಅಂತ ಹೇಳಲ್ಲ. ಆದರೆ, ಅವರು ಮಾತ್ರ ದೇಶಭಕ್ತರು, ಬೇರೆಯವರು ಅಲ್ಲ ಅನ್ನುವುದನ್ನು ನಾವು ಒಪ್ಪಲ್ಲ ಎಂದರು.