ಯತ್ನಾಳ್ ಹೇಳಿಕೆಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಕ್ಷಮೆಯಾಚಿಸಬೇಕು: ಡಿ.ಕೆ. ಶಿವಕುಮಾರ್ ಆಗ್ರಹ

Prasthutha|

ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಬಿಜೆಪಿ ಶಾಸಕ ಯತ್ನಾಳ್ ವಿಷಕನ್ಯೆ ಎಂದು ಕರೆಯುವ ಮೂಲಕ ಬಿಜೆಪಿ ಇಡೀ ದೇಶದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಕ್ಷಮೆ ಕೇಳಬೇಕು. ಅಲ್ಲದೆ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

- Advertisement -

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಯುಪಿಎ1 ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನ ನೀಡಿದರು. ಆದರೆ ಸೋನಿಯಾ ಗಾಂಧಿ ಅವರು ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೇಶದ ಪ್ರಧಾನಮಂತ್ರಿ ಹುದ್ದೆಯನ್ನು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ನೀಡಿದರು. ಸೋನಿಯಾ ಗಾಂಧಿ ಅವರು ಈನೆಲದಲ್ಲಿ ಹುಟ್ಟದಿದ್ದರೂ ಇಂದಿರಾ ಗಾಂಧಿ ಅವರ ಸೊಸೆಯಾಗಿ ರಾಜೀವ್ ಗಾಂಧಿ ಅವರ ಧರ್ಮಪತ್ನಿಯಾಗಿ ಈ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜೀವನ ಮಾಡಿಕೊಂಡು ಬಂದಿದ್ದಾರೆ. ಎರಡು ಬಾರಿ ಅಂದರೆ 10 ವರ್ಷಗಳ ಕಾಲ ಅವರು ಪ್ರಧಾನಿ ಹುದ್ದೆ ತ್ಯಾಗ ಮಾಡಿದರು. ನಮ್ಮೆಲ್ಲರ ಒತ್ತಡದ ಮೇರೆಗೆ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡು ಪಕ್ಷದ ಅಧ್ಯಕ್ಷರಾದರು. ಆಮೂಲಕ ನಮಗೆ ಶಕ್ತಿ ತುಂಬಿದ್ದಾರೆ. ನನ್ನಂತಹ ಕಾರ್ಯಕರ್ತನನ್ನು ಬಿಜೆಪಿಯವರು ತಿಹಾರ್ ಜೈಲಿಗೆ ಕಳುಹಿಸಿದಾಗ ಅಲ್ಲಿಗೆ ಭೇಟಿ ನೀಡಿ ಎಲ್ಲಾ ಕಾರ್ಯಕರ್ತರಿಗೆ ಶಕ್ತಿ ತುಂಬಿದ ಆ ತಾಯಿಯನ್ನು ಕೇಂದ್ರದ ಮಾಜಿ ಸಚಿವ ಹಾಲಿ ಶಾಸಕ ವಿಷ ಕನ್ಯೆ ಎಂದು ಕರೆದಿದ್ದಾರೆ. ಮಿಸ್ಟರ್ ಯತ್ನಾಳ್ ನಿನ್ನ ನಾಲಿಗೆ ಯಾರು ಏನು ಮಾಡುತ್ತಾರೋ ಗೊತ್ತಿಲ್ಲ. ಈ ರಾಜ್ಯದ ಸಂಸ್ಕೃತಿ ಇರುವ ಜನ ಏನು ಮಾಡುತ್ತಾರೋ ಗೊತ್ತಿಲ್ಲ. ಆದರೆ ನನ್ನ ತಾಯಿ ಸಮಾನರಾದ ಸೋನಿಯಾ ಗಾಂಧಿ ಅವರನ್ನು ವಿಷ ಕನ್ಯೆ ಎಂದು ಕರೆದಿರುವುದನ್ನು ಕಾಂಗ್ರೆಸ್ ಪಕ್ಷ ಸಹಿಸಿಕೊಳ್ಳುವುದಿಲ್ಲ ಎಂದರು.

ನಾವು ಯತ್ನಾಳ್ ಕ್ಷಮಾಪಣೆ ಕೇಳುತ್ತಿಲ್ಲ. ಈ ದೇಶದ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಕ್ಷಮೆ ಕೋರಬೇಕು. ಇದು ಕೇವಲ ಸೋನಿಯಾ ಗಾಂಧಿ ಅವರಿಗೆ ಮಾಡಿರುವ ಅಪಮಾನ ಮಾತ್ರವಲ್ಲ. ದೇಶಕ್ಕಾಗಿ ತನ್ನ ಸರ್ವಸ್ವ ತ್ಯಾಗ ಮಾಡಿರುವ ಮಹಿಳೆಯರಿಗೆ ಆಗಿರುವ ಅಪಮಾನ. ಬಿಜೆಪಿ ಅಧ್ಯಕ್ಷರಾದ ನಡ್ಡಾ ಅವರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಿ ಎಂದು ಆಗ್ರಹಿಸಿದ್ದಾರೆ.

- Advertisement -

ಭಾರತೀಯ ಸಂಸ್ಕೃತಿ ಮಹಿಳೆಯರನ್ನು ಪೂಜಿಸುವ ಸಂಸ್ಕೃತಿ. ನಾವು ನಮ್ಮ ದೇಶವನ್ನು ಭಾರತ ಮಾತೆ ಎಂದು ಕರೆಯುತ್ತೇವೆ. ಆಮೂಲಕ ದೇಶ, ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ.

ಮಹಿಳೆಯರನ್ನು ಅಪಮಾನ ಮಾಡುವುದು ಬಿಜೆಪಿಯವರ ಚಾಳಿ. ಅವರಿಗೆ ನೆಹರೂ ಕುಟುಂಬವನ್ನು ಟೀಕಿಸುವ ಚಾಳಿ. ಮೋದಿ ಅವರು ಸೋನಿಯಾ ಗಾಂಧಿ ಅವರನ್ನು ಜೆರ್ಸಿ ಹಸು ಎಂದು ಕರೆದಿದ್ದರು. ಇದು ನಿಮ್ಮ ಧರ್ಮ, ಸಂಸ್ಕೃತಿನಾ ಪ್ರಧಾನಮಂತ್ರಿಗಳೇ? ರಾಹುಲ್ ಗಾಂಧಿ ಅವರನ್ನು ಹೈಬ್ರೀಡ್ ಕರು ಎಂದು ಕರೆದರು. ಆದರೆ ರಾಹುಲ್ ಗಾಂಧಿ ಎಲ್ಲ ಅಧಿಕಾರ ತ್ಯಾಗ ಮಾಡಿ ಜನರ ಕಷ್ಟ ಸುಖಃ ಅರಿತು ಎಲ್ಲರನ್ನೂ ಒಂದುಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ವಿಧವೆ ಎಂದು ಕರೆದಿದ್ದೀರಿ, ನಮ್ಮ ತಾಯಿ, ನಿಮ್ಮ ತಾಯಿ ವಿಧವೆಯರಲ್ಲವೇ? ಇದು ಪ್ರಕೃತಿ ನಿಯಮ ಇದು. ನಮ್ಮ ಪಕ್ಷದ ಗುರುತನ್ನು ರಕ್ತದ ಕೈ ಎಂದು ಕರೆದರು. ಈ ಹಸ್ತದ ಶಕ್ತಿ ಏನು ಎಂಬುದನ್ನು ಮೇ 13ರಂದು ತಿಳಿಯಲಿದೆ ಎಂದರು.

Join Whatsapp