ನವದೆಹಲಿ: ಚೀನಾ ವಿಷಯದ ಬಗ್ಗೆ ಪ್ರಧಾನಿಯವರ ಪ್ರತಿಕ್ರಿಯೆ ನಾಚಿಕೆಗೇಡಿನ ಸಂಗತಿ. ಮಾತ್ರವಲ್ಲ, ನಮ್ಮ ಗಡಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ಹುತಾತ್ಮರಿಗೆ ಮಾಡಿದ ಅವಮಾನವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿಗಾರಿದ್ದಾರೆ.
ಅಮೆರಿಕದ ನಿಯತಕಾಲಿಕೆ ನ್ಯೂಸ್‌ವೀಕ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾದೊಂದಿಗಿನ ಭಾರತದ ಸಂಬಂಧಗಳ ಬಗ್ಗೆ ಮಾತನಾಡಿದ ಒಂದು ದಿನದ ನಂತರ, ಕಾಂಗ್ರೆಸ್ ಹಿರಿಯ ನಾಯಕ ಪ್ರತಿಕ್ರಿಯಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, 2020ರಲ್ಲಿ ಭಾರತ-ಚೀನಾ ಗಡಿ ರೇಖೆಯ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಬಳಿ ನಡೆದ ಚಕಮಕಿಯಲ್ಲಿ 20 ಭಾರತೀಯ ಸೈನಿಕರ ಸಾವಿನ ಬಗ್ಗೆ ಪ್ರಧಾನಿಯ ಹೇಳಿಕೆಗಳಿಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸತ್ಯವನ್ನು ಮರೆಮಾಚುವ ಮೂಲಕ ದೇಶವನ್ನು ವಂಚಿಸಿದ್ದಕ್ಕಾಗಿ ಪ್ರಧಾನಿ ಮೋದಿ 140 ಕೋಟಿ ಭಾರತೀಯರಲ್ಲಿ ಕ್ಷಮೆಯಾಚಿಸಬೇಕು. ಚೀನಾದೊಂದಿಗಿನ ಗಡಿಯನ್ನು ರಕ್ಷಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.