ನವದೆಹಲಿ: ಪ್ರಜಾಪ್ರಭುತ್ವದ ಆಲಯವಾದ ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಹೆದರುವ ವ್ಯಕ್ತಿ ಇದ್ದಾರೆ. ಆದರೆ ಇಂತಹ ನಿರಂಕುಶಾಧಿಕಾರಿಗಳನ್ನು ಹೇಗೆ ಗಮನಿಸಬೇಕು ಎಂಬುದು ನಮಗೆ ಗೊತ್ತಿದೆ ಎಂದು ಮೋದಿಯವರ ಹೆಸರು ಹೇಳದೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಪ್ರಧಾನಿಯ ಕಾಲೆಳೆದ್ದಾರೆ.
ಬೆಲೆಯೇರಿಕೆ ಮತ್ತು ಜೀವನಾವಶ್ಯಕ ವಸ್ತುಗಳ ಮೇಲೆ ಜಿಎಸ್ ಟಿ ಹೇರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಎದುರಿಸಲು, ಪ್ರಶ್ನೆಗೆ ಉತ್ತರಿಸಲು ಇವರು ಯಾಕೆ ತಯಾರಿಲ್ಲ ಎಂಬುದನ್ನು ರಾಹುಲ್ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ. ಸಂಸತ್ತಿನ ಎರಡೂ ಸದನಗಳಲ್ಲಿ ಈ ವಿಷಯದ ಚರ್ಚೆಗೆ ಸಂಸತ್ತು ಅಧಿವೇಶನ ಆರಂಭವಾದಂದಿನಿಂದಲೂ ರಾಹುಲ್ ಒತ್ತಾಯಿಸುತ್ತಿದ್ದಾರೆ.
“ಅಡುಗೆ ಅನಿಲ ಸಿಲಿಂಡರಿಗೆ ರೂ. 1,053 ಯಾಕೆ? ಮೊಸರು ಮತ್ತು ಧಾನ್ಯಗಳ ಮೇಲೆ ಜಿಎಸ್ ಟಿ ಏಕೆ? ಸಾಸಿವೆ ಎಣ್ಣೆ ಲೀಟರಿಗೆ ರೂ. 200 ಏಕೆ? ಈ ರಾಜ 57 ಸಂಸದರನ್ನು ಬಂಧಿಸಿದ್ದಾರೆ ಮತ್ತು 23 ಸಂಸದರನ್ನು ನಿರುದ್ಯೋಗ ಮತ್ತು ಬೆಲೆಯೇರಿಕೆ ಪ್ರಶ್ನೆಯನ್ನು ಸಂಸತ್ತಿನಲ್ಲಿ ಎತ್ತಿದ್ದಕ್ಕಾಗಿ ಅಮಾನತು ಮಾಡಿಸಿದ್ದಾರೆ. ಈ ರಾಜ ಪ್ರಜಾಪ್ರಭುತ್ವದ ದೇಗುಲದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಹೆದರಿದ್ದಾರೆ. ಆದರೆ ನಿರಂಕುಶ ರಾಜರ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಬಲ್ಲೆವು.”ಎಂದು ರಾಹುಲ್ ಹೇಳಿದ್ದಾರೆ.
ಸಂಸತ್ತಿನ ಎರಡೂ ಮನೆಗಳಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಂಸತ್ತನ್ನು ಮುಂದೂಡಲಾಗುತ್ತಿದೆ. ರಾಜ್ಯಸಭೆಯಲ್ಲಿ ಹೀಗೇ ಪ್ರಶ್ನೆ ಎತ್ತಿದ್ದಕ್ಕೆ ಇಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ರನ್ನು ಈ ವಾರಾಂತ್ಯದವರೆಗೆ ಅಮಾನತು ಮಾಡಲಾಗಿದೆ.
ಮಂಗಳವಾರ ನಾನಾ ಪಕ್ಷಗಳ 19 ಸಂಸದರನ್ನು ಘೋಷಣೆ ಕೂಗಿದ್ದಕ್ಕಾಗಿ ರಾಜ್ಯ ಸಭೆಯಿಂದ ಅಮಾನತು ಮಾಡಲಾಗಿದೆ. ಸೋಮವಾರ ಲೋಕಸಭೆಯಲ್ಲಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಫಲಕ ತೋರಿ ಘೋಷಣೆ ಹಾಕಿದ್ದಕ್ಕಾಗಿ ಮುಂಗಾರು ಅಧಿವೇಶನದುದ್ದಕ್ಕೂ ಅಮಾನತು ಮಾಡಲಾಗಿದೆ.
ಅಮಾನತುಗೊಂಡ ಎಲ್ಲ ಸಂಸದರು ಕಾಂಗ್ರೆಸ್ಸಿನ ಹೋರಾಟದೊಡನೆ ಸಂಬಂಧ ಹೊಂದಿದವರಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.