ಆಟಗಾರರು ಯಂತ್ರಗಳಲ್ಲ, ವಿಶ್ರಾಂತಿಯ ಅಗತ್ಯವಿದೆ: ರೋಹಿತ್ ಶರ್ಮಾ

Prasthutha|

ಜೈಪುರ: ಬುಧವಾರದಿಂದ ಆರಂಭವಾಗಲಿರುವ ಟಿ20 ಟೂರ್ನಿ ಸರಣಿಯಿಂದ  ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಿಂದೆ ಸರಿದ ಬೆನ್ನಲ್ಲೇ ಟೀಮ್ ಇಂಡಿಯಾದ ನೂತನ ನಾಯಕ ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

- Advertisement -

‘ಸತತ ಕ್ರಿಕೆಟ್‌ ಆಡಲು ಆಟಗಾರರು ಯಂತ್ರಗಳಲ್ಲ, ಅವರಿಗೂ ವಿಶ್ರಾಂತಿಯ ಅಗತ್ಯವಿದೆ’ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೂ ಮುನ್ನಾ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಆಟಗಾರರ ಮೇಲಿನ ಒತ್ತಡದ ಕುರಿತು ಖಡಕ್ ಮಾತುಗಳನ್ನಾಡಿದ್ದಾರೆ.

ಸತತ ಹಾಗೂ ಬಿಡುವಿಲ್ಲದ ಕ್ರಿಕೆಟ್ ಹಾಗೂ ಪ್ರಯಾಣದಿಂದ ದೇಹ ಮಾತ್ರವಲ್ಲ ಮನಸ್ಸು ಕೂಡ ದಣಿಯುತ್ತದೆ. ಇದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಕೆಲ ಟೂರ್ನಿಗಳಿಂದ ಹೊರಗುಳಿಯಲೇಬೇಕಾಗಿದೆ. ಆಟಗಾರರ ವರ್ಕ್‌ಲೋಡ್ ಅರಿತುಕೊಳ್ಳುವ ಅಗತ್ಯವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಕೆಲ ಆಟಗಾರರು ಯಾವುದೇ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳದೇ ಆಡುತ್ತಿದ್ದಾರೆ. ಅಂಥವರಿಗೆ ವಿಶ್ರಾಂತಿಯ ಅಗತ್ಯವಿದೆ. ಇದರಿಂದ ಆಟಗಾರರು ಮಾನಸಿಕ ಹಾಗೂ ಶಾರೀರಕವಾಗಿ ಫಿಟ್ ಆಗಿರುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

- Advertisement -

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಲೀಗ್ ಹಂತದಿಂದ ಹೊರಬಿದ್ದಿತ್ತು. ಹೀಗಾಗಿ ಕೆಲ ದಿನಗಳ ವಿಶ್ರಾಂತಿ ಸಿಕ್ಕಿದೆ. ಆದರೆ ನ್ಯೂಜಿಲೆಂಡ್ ತಂಡ ನವೆಂಬರ್ 14 ರಂದು ಆಸ್ಟ್ರೇಲಿಯಾ ವಿರುದ್ದ ಫೈನಲ್ ಪಂದ್ಯ ಆಡಿದೆ. ರನ್ನರ್ ಅಪ್ ಆಗಿರುವ ನ್ಯೂಜಿಲೆಂಡ್ ತಂಡಕ್ಕೆ ವಿಶ್ರಾಂತಿಯೇ ಇಲ್ಲ. ದುಬೈನಿಂದ ಭಾರತ ತಲುಪಿರುವ ನ್ಯೂಜಿಲೆಂಡ್ ಬುಧವಾರ ಮೈದಾನಕ್ಕಿಳಿಯಲಿದೆ. ಆದರೆ ಟಿ20 ಸರಣಿಯಿಂದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೊರಗುಳಿದ್ದಾರೆ. ಸತತ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದಾರೆ. ವಿಲಿಯಮ್ಸನ್ ಟೆಸ್ಟ್ ಟೂರ್ನಿಗೆ ಮರಳಲಿದ್ದಾರೆ.

ಟೀಂ ಇಂಡಿಯಾ ನೂತನ ಕೋಚ್ ರಾಹುಲ್ ದ್ರಾವಿಡ್ ಕೂಡ ಆಟಗಾರರ ಮೇಲಿನ ಒತ್ತಡ ಕುರಿತು ಮಾತನಾಡಿದ್ದಾರೆ. ಕ್ರಿಕೆಟಿಗರು ಫುಟ್ಬಾಲ್ ಪಟುಗಳ ರೀತಿ ಅನುಕರಿಸಬೇಕಿದೆ. ವರ್ಕ್‌ಲೋಡ್ ನಿಭಾಯಿಸಲು ಫುಟ್ಬಾಲ್ ಪಟುಗಳು ಎಲ್ಲಾ ಪಂದ್ಯಗಳನ್ನು ಆಡುವುದಿಲ್ಲ. ಇದನ್ನು ಕ್ರಿಕೆಟಿಗರು ಅನುಸರಿಸಬೇಕು ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

Join Whatsapp