ಸಾರ್ವಜನಿಕ ವಾಹನಗಳಿಗೆ ನಿಗಾ ಉಪಕರಣಗಳನ್ನು ಅಳವಡಿಸಲು ಯೋಜನೆ

Prasthutha|

ಬೆಂಗಳೂರು: ವಾಹನಗಳಲ್ಲಿ ಅಪಘಾತ ಮತ್ತು  ಲೈಂಗಿಕ ದೌರ್ಜನ್ಯದಂತಹ ಘಟನೆಗಳನ್ನು ತಪ್ಪಿಸಲು ಶಾಲಾ ವಾಹನಗಳೂ ಸೇರಿದಂತೆ ಸುಮಾರು 6.87 ಲಕ್ಷ ಸಾರ್ವಜನಿಕ ಸಾರಿಗೆ ವಾಹನಗಳಿಗೆ  ತುರ್ತು ಪ್ಯಾನಿಕ್ ಬಟನ್‌ ಮತ್ತು ವಾಹನ ಚಲನೆ ನಿಗಾ ಉಪಕರಣಗಳನ್ನು (vehicle location tracking devices and emergency panic buttons) ಅಳವಡಿಸಲು ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ.

- Advertisement -

ಸಂಪುಟ ಸಭೆಯ ನಂತರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಯೋಜನೆಗೆ ₹20.30 ಕೋಟಿ ಅನುದಾನ ನೀಡಲು ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಅದರಲ್ಲೂ ಶೇಕಡಾ 60ರಷ್ಟು ಕೇಂದ್ರ ಸರ್ಕಾರ ಹಾಗೂ ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದರು.

ರಾಜ್ಯದ ಸಾರ್ವಜನಿಕ ಸಾರಿಗೆ ಸೇವೆಯಲ್ಲಿರುವ ಬಸ್ ಗಳು, ಕ್ಯಾಬ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸೇರಿ ವಿವಿಧ ರೀತಿಯ ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ ಈ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಲಾಗುವುದು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಅದರ ಪ್ರಕಾರ ಎಲ್ಲ ರಾಜ್ಯಗಳಿಗೂ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಲು ನೆರವು ನೀಡುತ್ತಿದೆ. ಇದಕ್ಕೆ ಕ್ಲೌಡ್ ಸರ್ವಿಸ್ ಸೇವೆಯನ್ನೂ ಕೇಂದ್ರವೇ ನೀಡುತ್ತದೆ ಎಂದರು.

- Advertisement -

4.51 ಲಕ್ಷ ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳು, 16,432 ಶಾಲಾ ಬಸ್‌ಗಳು, 23,077 ಖಾಸಗಿ ಸಾರಿಗೆ ವಾಹನಗಳು, 24,701 ಕೆಎಸ್‌ಆರ್‌ಟಿಸಿ ಬಸ್‌ಗಳು, 5,138 ಗುತ್ತಿಗೆ ವಾಹನಗಳು, 1,900 ಪ್ರವಾಸಿ ಬಸ್‌ಗಳು ಮತ್ತು 85,949 ಸರಕು ವಾಹನಗಳು ಸೇರಿದಂತೆ 6.08 ಲಕ್ಷಕ್ಕೂ ಹೆಚ್ಚು ವಾಹನಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗುವುದು ಎಂದರು.

ಅಪಘಾತಗಳನ್ನು ನಿಯಂತ್ರಿಸಲು ವಾಹನಗಳು ಸಂಚರಿಸುತ್ತಿರುವ ಹಾದಿಯ ಮೇಲೆ ಕಣ್ಣಿಟ್ಟು ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಿದೆ. ವಾಹನಗಳು ನಿಗದಿತ ವೇಗದಲ್ಲಿ ಮತ್ತು ನಿಗದಿತ ರಸ್ತೆಯಲ್ಲಿ ಸಾಗುತ್ತಿದೆಯೇ? ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲ್ಲಿಸಿದ್ದಾರೆಯೇ? ವಾಹನ ಸಂಚಾರದಲ್ಲಿ ಅನಗತ್ಯ ವಿಳಂಬವಾಗುತ್ತಿದೆಯೇ? ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆಯೇ? ಮುಂತಾದ ಚಟುವಟಿಕೆಗಳನ್ನು ನಿಯಂತ್ರಣ ಕೊಠಡಿಗಳಿಂದ ಗಮನಿಸಿ, ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

Join Whatsapp