ರಾಜಕೀಯ ವಿರೋಧಿಗಳು ದಾಖಲಿಸಿದ ಸುಳ್ಳು ಕ್ರಿಮಿನಲ್ ಪ್ರಕರಣದ ಹಿನ್ನೆಲೆಯಲ್ಲಿ ಪಿಐಎಲ್ ವಿಚಾರಣೆ ಮುಂದೂಡಿಕೆ: ವಿಕ್ಟರ್ ಮಾರ್ಟೀಸ್ ಸ್ಪಷ್ಟನೆ

Prasthutha|

ಬೆಂಗಳೂರು: ರಾಜ್ಯ ಬಿಜೆಪಿ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಕಡಬ ಮೂಲದ ವಿಕ್ಟರ್ ಮಾರ್ಟೀಸ್ ಎಂಬವರು ಕರ್ನಾಟಕ ಹೈಕೋರ್ಟ್’ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ನೇತೃತ್ವದ ಪೀಠದ ಎದುರು ಈ ಅರ್ಜಿ ವಿಚಾರಣೆಗೆ ಬಂದಿತ್ತು.

- Advertisement -

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ರಾಜ್ಯದಲ್ಲಿ ಸರ್ಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಈ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದರು.

ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಪರ ವಾದಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಅರ್ಜಿದಾರ ವಿಕ್ಟರ್ ಮಾರ್ಟೀಸ್ ವಿರುದ್ಧ 2 ಕ್ರಿಮಿನಲ್ ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧದ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸರ್ಕಾರಿ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರ ಪೀಠ, ಈ ಅರ್ಜಿಯ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದರು.

- Advertisement -

ಈ ಮಧ್ಯೆ ತನ್ನ ವಿರುದ್ಧದ ಆರೋಪದ ಕುರಿತು ವೀಡಿಯೋ ತುಣುಕು ಮೂಲಕ ಸ್ಪಷ್ಟೀಕರಣ ನೀಡಿರುವ ವಿಕ್ಟರ್, ಇದುವರೆಗೂ ನನ್ನ ವಿರುದ್ಧ ಮತಾಂತರ ಪ್ರಕರಣ ದಾಖಲಿಸಲಾಗಿಲ್ಲ. ಸುಖಾಸುಮ್ಮನೆ ನನ್ನ ಮೇಲೆ ಮತಾಂತರದ ಆರೋಪ ಹೊರಿಸಿ ತೇಜೋವಧೆ ಮಾಡಲಾಗುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ನನ್ನ ವಿರುದ್ಧ ರಾಜಕೀಯ ವಿರೋಧಿಗಳು ದಾಖಲಿಸಿದ ಸುಳ್ಳು ಕ್ರಿಮಿನಲ್ ಪ್ರಕರಣದ ಹಿನ್ನೆಲೆಯಲ್ಲಿ ಮತಾಂತರ ನಿಷೇಧದ ವಿರುದ್ಧ ಸಲ್ಲಿಸಿದ ಪಿಐಎಲ್ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp