ವಾಷಿಂಗ್ಟನ್: ಮಿದುಳು ನಿಷ್ಕ್ರಿಯಗೊಂಡ ಮಹಿಳೆಯೋರ್ವರಿಗೆ ಹಂದಿಯ ಮೂತ್ರಪಿಂಡ [ ಕಿಡ್ನಿ] ವನ್ನು ಅಳವಡಿಸುವ ಪ್ರಯೋಗದಲ್ಲಿ ಅಮೆರಿಕಾದ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನ್ಯೂಯಾರ್ಕ್ ನ ಲಂಗೋನ್ ಹೆಲ್ತ್ ಸಂಸ್ಥೆಯ ವಿಜ್ಞಾನಿಗಳು ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಿದುಳು ನಿಷ್ಕ್ರಿಯವಾಗಿ ಜೀವರಕ್ಷಕ ಸಾಧನದ ಮೇಲೆ ಜೀವಂತವಿರುವ ಮಹಿಳೆಗೆ ಆಕೆಯ ಕುಟುಂಬದವರ ಅನುಮತಿ ಪಡೆದು ಹಂದಿ ಕಿಡ್ನಿ ಕಸಿ ಮಾಡಲಾಗಿದೆ. ಕಿಡ್ನಿ ಕಸಿಯಾದ ಮೇಲೆ ಮೂರು ದಿನ ಅದನ್ನು ಆಕೆಯ ದೇಹದ ಹೊರಗೆ ನಿರ್ವಹಿಸಲಾಯಿತು. ಅಗತ್ಯ ಪ್ರಮಾಣದಷ್ಟು ಮೂತ್ರ ಆಕೆಯಿಂದ ಹೊರಬಂತು. ಯಾವುದೇ ಸಮಸ್ಯೆ ಆಗಿಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಲಾಯಿತು ಎಂದು ವೈದ್ಯರು ಹೇಳಿದ್ದಾರೆ.
ಹಂದಿಯ ಕಿಡ್ನಿಯನ್ನು ಅಳವಡಿಸಿದ ನಂತರ ರೋಗಿಯ ದೇಹದಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ ಈ ಪ್ರಯೋಗ ಯಶಸ್ವಿಯಾಗಿದೆ ಎಂದೇ ಹೇಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಹಂದಿಯ ಕಿಡ್ನಿಯನ್ನು ಮನುಷ್ಯರಿಗೆ ಅಳವಡಿಸುವ ಹಿಂದಿನ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು.ಆದರೆ ಈ ಬಾರಿ ಹಂದಿಯ ಕಿಡ್ನಿ ಅಳವಡಿಸುವ ಮುನ್ನ ಅದರ ಜೀನ್ಸ್ ಅನ್ನು ಬದಲಾವಣೆ ಮಾಡಿ ಸಕ್ಕರೆಯಾಂಶವನ್ನು ತೆಗೆದ ನಂತರ ಮನುಷ್ಯನ ದೇಹಕ್ಕೆ ಅಳವಡಿಸಲಾಗಿತ್ತು.
ಈ ಹಿಂದೆ ಅಮೆರಿಕದ ಬೇಬಿ ಫೇ ಹೆಸರಿನ ಮಗುವಿಗೆ ಬಬೂನ್ ಜಾತಿಯ ಮಂಗನ ಹೃದಯವನ್ನು ಅಳವಡಿಸಲಾಗಿತ್ತು. ಆ ಮಗು 21 ದಿನಗಳ ಕಾಲ ಅದೇ ಹೃದಯದೊಂದಿಗೆ ಉಸಿರಾಡಿತ್ತು. ಆದರೆ, ಈ ಪ್ರಯೋಗದಿಂದ ಹಂದಿಯ ಅಂಗಾಂಗ ಮನುಷ್ಯನಿಗೆ ಹೆಚ್ಚು ಹೊಂದಾಣಿಕೆಯಾಗುವ ಹೊಸ ಸಾಧ್ಯತೆಯನ್ನು ಕಂಡುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಜಗತ್ತಿನೆಲ್ಲೆಡೆ ಅಂಗಾಂಗಳ ಕೊರತೆ ಎದುರಾಗಿರುವುದರಿಂದ ಅಂಗಾಂಗ ದಾನದ ಬಗ್ಗೆ ಅಮೆರಿಕದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ದಶಕಗಳಿಂದಲೂ ಅಮೆರಿಕದ ಸಂಶೋಧಕರು ಮನುಷ್ಯರ ದೇಹಕ್ಕೆ ಪ್ರಾಣಿಗಳ ಅಂಗಗಳನ್ನು ಜೋಡಿಸುವ ಸಾಧ್ಯತೆ ಬಗ್ಗೆ ಅಧ್ಯಯನ, ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.