ಪಿಎಸ್ ಐ ಅಕ್ರಮದ ವಿಸ್ತೃತ ತನಿಖೆಗೆ ನೆರವಾದ ಫೋಟೋಶೂಟ್

Prasthutha|

ಕಲಬುರಗಿ: ಪಿಎಸ್ ಐ  ನೇಮಕಾತಿ ಅಕ್ರಮದ ಪ್ರಕರಣಕ್ಕೆ ಸಂಬಂಧ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ಸು ಕಂಡ ನಂತರ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿಬ್ಬಂದಿ ಮಾಡಿಸಿದ ಫೋಟೋಶೂಟ್ ಅಕ್ರಮ ಭೇದಿಸಲು ನೆರವಾಗಿದೆ.

- Advertisement -

ಪಿಎಸ್ ಐ ಪರೀಕ್ಷೆ ಬಳಿಕ ಎಲ್ಲ ಸಿಬ್ಬಂದಿಗೆ 4 ಸಾವಿರ ರೂ. ಹೆಚ್ಚಿನ ಭತ್ಯೆಯನ್ನು ಶಾಲೆಯ ಮಾಲಕಿ ದಿವ್ಯಾ ಹಾಗರಗಿ ನೀಡಿದ್ದರು. ಆ ಭತ್ಯೆ ನೀಡುವ ಸಂದರ್ಭದಲ್ಲಿ ನೆನಪಿನ ಸ್ಮರಣಾರ್ಥ ಇದೊಂದು ಐತಿಹಾಸಿಕ ದಿನವೆಂದು ಎಲ್ಲರಿಗೂ ಒಟ್ಟಿಗೆ ಕೂಡಿಸಿ ಫೋಟೋಶೂಟ್ ಮಾಡಿಕೊಂಡಿದ್ದರು.

ಫೋಟೋಶೂಟ್ ನಲ್ಲಿ ಬಹುತೇಕರು ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಪರಿಣಾಮ ಇದೀಗ ಸಿಐಡಿ ಬಲೆಗೆ ಬಿದ್ದಿದ್ದಾರೆ. ಈಗ ಅಕ್ರಮದ ನೇಮಕಾತಿ ಪ್ರಕರಣ ಭೇದಿಸಲು ಈ ಫೋಟೋಶೂಟ್ ಸಹಾಯವಾಗಿದೆ.

- Advertisement -

ಫೋಟೋಶೂಟ್ ನಲ್ಲಿ ಶಾಲಾ ಸಿಬ್ಬಂದಿ ಜೊತೆಗೆ ಪೊಲಿಸ್ ಅಧಿಕಾರಿಗಳು ಸಹ ಕ್ಯಾಮೆರಾಗೆ ಪೋಸ್ ನೀಡಿದ್ದು, ಡಿವೈಎಸ್ಪಿ ಹೊಸಮನಿ, ಸಿಪಿಐ ಆನಂದ ಮೇತ್ರೆ, ದಿಲೀಪ್ ಸಾಗರ ಸೇರಿದಂತೆ ಹಲವರು ಭಾಗಿಯಾಗಿದ್ದರು.

ದಿವ್ಯಾ ಹಾಗರಗಿ ಜೈಲಿಗೆ:

ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿಯನ್ನು ಇಂದು ಜೈಲಿಗೆ ಕಳುಹಿಸಲಾಗಿದೆ. ಸಿಐಡಿ ಕಸ್ಟಡಿಯ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನಂತರ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿಯನ್ನು18 ದಿನಗಳ ನಂತರ ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚಿನ ವಿಚಾರಣೆಗಾಗಿ 11 ದಿನ ಸಿಐಡಿ ಕಸ್ಟಡಿಗೆ ಪಡೆದಿತ್ತು.

ಬಹುತೇಕ ವಿಚಾರಣೆ ಮುಕ್ತಾಯವಾಗಿದ್ದು ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಕಡಿಮೆ ಇದೆ.  ಬಂದೋಬಸ್ತ್ ನಲ್ಲಿ ದಿವ್ಯಾ ಹಾಗರಗಿಯನ್ನು ಕಲಬುರಗಿಗೆ ಕರೆ ತಂದ ಸಿಐಡಿ 11 ದಿನ ಸುದೀರ್ಘ ವಿಚಾರಣೆ ನಡೆಸಿದ ಸಿಐಡಿ ತಂಡ ಅನೇಕ ಮಾಹಿತಿ ಕಲೆ ಹಾಕಿದೆ.

ನಿನ್ನೆ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆ, ಹಳೆ ಜೇವರ್ಗಿ ರಸ್ತೆಯಲ್ಲಿರುವ ಮನೆ ಸ್ಥಳ ಮಹಜರ್ ಮಾಡಿದ್ದಾರೆ. ಶಾಲೆಯಲ್ಲಿ ಜೆರಾಕ್ಸ್ ಮೆಷೀನ್ ಸೇರಿದಂತೆ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Join Whatsapp