ನನ್ನ ಸಮ್ಮತಿಯಿಲ್ಲದೆಯೇ ಆಸ್ಪತ್ರೆಯಲ್ಲಿ ಫೋಟೋ ತೆಗೆದಿದ್ದಾರೆ, ಬೆಂಬಲ ಮಾತ್ರ ನೀಡಿಲ್ಲ: ಪಿಟಿ ಉಷಾ ವಿರುದ್ಧ ವಿನೇಶ್ ಕಿಡಿ

Prasthutha|

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿದ್ದ ನನ್ನೊಂದಿಗೆ ಚಿತ್ರವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಬೇರೆ ಯಾವುದೇ ಸಹಾಯವನ್ನು ಮಾಡಿಲ್ಲ. ವಿಷಯವನ್ನು ರಾಜಕೀಯಗೊಳಿಸಿದ್ದಾರೆ ಎಂದು ಮಹಿಳಾ ಕುಸ್ತಿಪಟು, ಕಾಂಗ್ರೆಸ್ ನಾಯಕಿ ವಿನೇಶ್ ಫೋಗಟ್ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ವಿರುದ್ದ ಕಿಡಿಕಾರಿದ್ದಾರೆ.

- Advertisement -


ತನ್ನ ತೂಕ ಇಳಿಸಲು ರಾತ್ರಿಯಿಡೀ ಶ್ರಮ ಪಟ್ಟಿದ್ದ ವಿನೇಶ್ ಫೋಗಟ್ ಡಿಹೈಡ್ರೇಷನ್ ನಿಂದಾಗಿ (ನಿರ್ಜಲೀಕರಣ) ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಐಒಎ ಮುಖ್ಯಸ್ಥೆ ಪಿಟಿ ಉಷಾ ಅವರು ವಿನೇಶ್ ಫೋಗಟ್ ಅವರನ್ನು ಭೇಟಿಯಾಗಿದ್ದರು. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎಲ್ಲಾ ಬೆಂಬಲದ ಭರವಸೆಯನ್ನು ನೀಡಿದ್ದರು. ಈ ಚಿತ್ರ ಭಾರೀ ವೈರಲ್ ಆಗಿತ್ತು.


ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿನೇಶ್ ಫೋಗಟ್, ‘ಪಿ.ಟಿ.ಉಷಾ ಅವರು ಆಸ್ಪತ್ರೆಯಲ್ಲಿ ನನ್ನನ್ನು ಭೇಟಿಯಾಗಿದ್ದರು. ಅಲ್ಲಿ ಒಂದು ಚಿತ್ರವನ್ನು ಸೆರೆ ಹಿಡಿಯಲಾಯಿತು. ನೀವು ಹೇಳಿದಂತೆ ಮುಚ್ಚಿದ ಬಾಗಿಲಿನ ಹಿಂದೆ ಸಾಕಷ್ಟು ರಾಜಕೀಯ ನಡೆಯುತ್ತದೆ. ಅದೇ ರೀತಿ ಪ್ಯಾರಿಸ್ ನಲ್ಲೂ ರಾಜಕೀಯ ನಡೆಯಿತು. ಅದರಿಂದಾಗಿಯೇ ನನ್ನ ಹೃದಯ ಒಡೆದು ಹೋಯಿತು. ಸಾಕಷ್ಟು ಮಂದಿ ನನಗೆ ಕುಸ್ತಿಯನ್ನು ಮುಂದುವರಿಸುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ, ಏನಕ್ಕಾಗಿ ನಾನು ಕುಸ್ತಿ ಮುಂದುವರಿಸಲಿ? ಎಲ್ಲ ಕಡೆಯೂ ರಾಜಕೀಯವಿದೆ’ ಎಂದು ಕಿಡಿ ಕಾರಿದ್ದಾರೆ.

- Advertisement -


ಸದ್ಯ, ಕುಸ್ತಿಗೆ ವಿದಾಯ ಘೋಷಿಸಿ, ರೈಲ್ವೆ ಇಲಾಖೆಯಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ವಿನೇಶ್ ಫೋಗಟ್, ಸದ್ಯದಲ್ಲೇ ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.



Join Whatsapp