ಬೆಂಗಳೂರು, ಜು.22: ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳು ತನಿಖೆಯ ನೇತೃತ್ವ ವಹಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಭಾಗಿಯಾಗಿದೆ. ಇದು ಪ್ರಜಾಪ್ರಭತ್ವದ ಮೇಲಿನ ಅಪರಾಧ ಎಂದು ಅವರು ಹೇಳಿದ್ದಾರೆ.
ಟೆಲಿಫೋನ್ ಕದ್ದಾಲಿಕೆ ಪ್ರಕರಣ ಖಂಡಿಸಿ ಇಂದು ಹಮ್ಮಿಕೊಂಡಿದ್ದ ರಾಜಭವನ ಚಲೋ ಕಾರ್ಯಕ್ರಮದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿದರು.
ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ವೇಳೆ ನನ್ನ ಆಪ್ತ ಸಹಾಯಕನ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿದೆ. ಫೋನ್ ಕದ್ದಾಲಿಕೆ ಜೊತೆಗೆ ಫೋನ್ ಹ್ಯಾಕ್ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಆಪ್ತ ಸಹಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿವಿಧ ನ್ಯಾಯಾಧೀಶರ ದೂರವಾಣಿಗಳನ್ನು ಕದ್ದಾಲಿಸಲಾಗಿದೆ ಎಂದರು.
ಇಡೀ ದೇಶದಲ್ಲಿ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ನನ್ನ ಪ್ರಕಾರ ಇದು ಅಪರಾಧ. ಸಂವಿಧಾನಕ್ಕೆ ವಿರುದ್ಧವಾದದ್ದು. ಸಂವಿಧಾನದಲ್ಲಿ ಕೊಟ್ಟಿರುವ ರಕ್ಷಣೆಯನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ಪೆಗಾಸಿಸ್ ಎಂಬ ಏಜೆನ್ಸಿ ನಿಗದಿ ಮಾಡಿ ಕದ್ದಾಲಿಕೆಗೆ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ.
ಸರ್ಕಾರವೇ ಟೆಲಿಫೋನ್ ಕದ್ದಾಲಿಕೆ ಮಾಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಹೀಗಾಗಿ ಪ್ರಧಾನಿ ಹುದ್ದೆಯಲ್ಲಿ ಅವರು ನೈತಿಕವಾಗಿ ಮುಂದುವರಿಯಬಾರದು.
ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಚಾರ ಪ್ರಸ್ತಾಪಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ನ್ಯಾಯಾಂಗ ತನಿಖೆಗೆ ಎರಡೂ ಕಡೆ ಒತ್ತಡ ಹೇರಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ದೂರವಾಣಿ ಕದ್ದಾಲಿಕೆ ಡರ್ಟಿ ಗೇಮ್. ಪ್ರಜಾಪ್ರಭುತ್ವದ ಮೇಲಿನ ಅಪರಾಧ ಕೂಡಲೇ ನಿಲ್ಲಿಸಬೇಕು. ಪ್ರಕರಣದ ಹಿಂದೆ ಯಾರು ಇದ್ದಾರೆ ಎಂಬುದು ದೇಶದ ಜನತೆಗೆ ಗೊತ್ತಾಗಬೇಕು. ಕೇಂದ್ರ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ ಎಂಬುದರಲ್ಲಿ ಅನುಮಾನ ಇಲ್ಲ. ಕೇಂದ್ರವಲ್ಲದೆ ಮತ್ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜಭವನ ಚಲೋ ಮುನ್ನ ಸಿದ್ದರಾಮಯ್ಯ ಅವರು ವಿಧಾನಸೌಧದ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಶಾಸಕರ ಸಭೆ ನಡೆಸಿದರು. ಬಳಿಕ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲಾಯಿತು. ಇದಾದ ನಂತರ ಪಾದಯಾತ್ರೆಯಲ್ಲಿ ರಾಜಭವನದ ಕಡೆ ಹೊರಟ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಹಿರಿಯ ಮುಖಂಡರಾದ ಕೆ.ಜೆ. ಜಾರ್ಜ್, ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ಶಿವಾನಂದ ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತಿತರರು ಭಾಗವಹಿಸಿದ್ದರು.