ನವದೆಹಲಿ: ಗ್ರಾಹಕರ ವಿಶ್ವಾಸವನ್ನು ಪುನ ಪಡೆಯಲು ಮತ್ತು ಕಾರ್ಯ ನಿರ್ವಹಣೆಯನ್ನು ಸುಧಾರಿಸಲು ಜಾಗತಿಕವಾಗಿ ಸುಮಾರು 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಎಲೆಕ್ಟ್ರಾನಿಕ್ಸ್ ದೈತ್ಯ ಫಿಲಿಪ್ಸ್ ಸಂಸ್ಥೆ ಘೋಷಿಸಿದೆ.
ಫಿಲಿಪ್ಸ್ ನ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹೊಸ ಮುಖ್ಯ ಕಾರ್ಯ ನಿರ್ವಾಹಕ ರಾಯ್ ಜಾಕೋಬ್ಸ್, ಗ್ರಾಹಕರ ವಿಶ್ವಾಸವನ್ನು ಪುನರ್ನಿರ್ಮಿಸಲು ನಾವು ಪ್ರಾರಂಭಿಸಲು ಸಾಧ್ಯವಾಗುವಂತೆ ಕಾರ್ಯ ನಿರ್ವಹಣೆಯನ್ನು ಸುಧಾರಿಸುವುದು ಫಿಲಿಪ್ಸ್ ನ ಆಧ್ಯತೆಯಾಗಿದೆ. ಆದ್ದರಿಂದ ನಮ್ಮ ಕಾರ್ಯ ಪಡೆಯಲ್ಲಿ ಜಾಗತಿಕವಾಗಿ ಸುಮಾರು 4,000 ಉದ್ಯೋಗಗಳನ್ನು ತಕ್ಷಣವೇ ಕಡಿಮೆ ಮಾಡುವ ಕಷ್ಟಕರವಾದ, ಆದರೆ ಅಗತ್ಯವಾದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆ ಹಾಗೂ ಪೂರೈಕೆ ಸವಾಲುಗಳಿಂದ Q3 ಮಾರಾಟವು ಪ್ರಭಾವಿತವಾಗಿದೆ ಎಂದು ಫಿಲಿಪ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಕಂಪನಿಯು ಕಳೆದ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮೂರು ಬಿಲಿಯನ್ ಯುರೋಗಳ ನಿವ್ವಳ ಲಾಭವನ್ನು ದಾಖಲಿಸಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟವು 4.3 ಬಿಲಿಯನ್ ಯುರೋಗಳಿಗೆ ಬಂದಿದ್ದು, ಪೂರೈಕೆ ಸರಪಳಿಯ ಸಮಸ್ಯೆಗಳಿಂದಾಗಿ ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ಐದು ಪ್ರತಿಶತದಷ್ಟು ಕಡಿಮೆಯಾಗಿದೆ.
ಫಿಲಿಪ್ಸ್ ಪ್ರಸ್ತುತ 100 ದೇಶಗಳಲ್ಲಿ ಸುಮಾರು 80,000 ಜನರಿಗೆ ಉದ್ಯೋಗ ನೀಡುತ್ತಿದೆ.