ಶ್ರೀರಂಗಪಟ್ಟಣ ಮಸ್ಜಿದ್ ಮೇಲೆ ದಾಳಿಗೆ ಸಂಘಪರಿವಾರದ ಸಂಚು: ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಪಾಪ್ಯುಲರ್ ಫ್ರಂಟ್ ಒತ್ತಾಯ

Prasthutha|

ಬೆಂಗಳೂರು: ಸಂಕೀರ್ತನಾ ಯಾತ್ರೆಯ ಹೆಸರಿನಲ್ಲಿ ಸಂಘಪರಿವಾರವು ಶ್ರೀರಂಗ ಪಟ್ಟಣದ ಐತಿಹಾಸಿಕ ಮಸ್ಜಿದ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದು, ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಸಂಭಾವ್ಯ ಅನಾಹುತವನ್ನು ತಡೆಯಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಆಗ್ರಹಿಸಿದ್ದಾರೆ.

- Advertisement -

ವಿವಾದ ಹುಟ್ಟು ಹಾಕುವ ದುರುದ್ದೇಶದಿಂದಲೇ ಸಂಘಪರಿವಾರವು 2019ರಿಂದ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಸಂಕೀರ್ತನ ಯಾತ್ರೆ ಪ್ರಾರಂಭಿಸಿದ್ದು, ಈ ಪ್ರಯುಕ್ತ 8 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹನುಮಾನ್ ಮಾಲಾಧಾರಿಗಳ ಹೆಸರಿನಲ್ಲಿ ಶ್ರೀರಂಗಪಟ್ಟಣದ ದೇವಸ್ಥಾನದ ವರೆಗೆ ಪಾದಯಾತ್ರೆ ನಡೆಸುತ್ತಿದ್ದು, ಇದು ಜಾಮಿಯ ಮಸ್ಜಿದ್ ಉಲ್ ಆಲಾ ಬಳಿಯಿಂದ ಹಾದು ಹೋಗುತ್ತದೆ. 2019ರಲ್ಲಿ ನಡೆದ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆಸಿ ಮಸ್ಜಿದ್ ಗೆ ಹಾನಿ ಉಂಟು ಮಾಡಲಾಗಿತ್ತು.

ಅದರೊಂದಿಗೆ ಮಸ್ಜಿದ್ ಒಡೆದು ದೇವಸ್ಥಾನ ಕಟ್ಟುತ್ತೇವೆಂದು ಬಹಿರಂಗ ಬೆದರಿಕೆಯನ್ನೂ ಒಡ್ಡಲಾಗಿತ್ತು. ಜನವರಿ 5, 2021ರಂದು ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮಂಡ್ಯದ ನಿವೃತ್ತ ಸಹಾಯಕ ಎಸ್ಪಿ ಹಾಗೂ ವಿಶ್ವ ಹಿಂದು ಪರಿಷತ್ ನ ಉಪಾಧ್ಯಕ್ಷ ಬಲರಾಮೇ ಗೌಡ, ಈ ವರ್ಷದ ಡಿಸೆಂಬರ್ ಒಳಗೆ ಮಸ್ಜಿದ್ ನೊಳಗಡೆ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಬೆದರಿಸಿದ್ದರು. ಶಾಂತಿ ಕದಡುವ ನಿಟ್ಟಿನಲ್ಲಿ ಇಷ್ಟೆಲ್ಲಾ ದುಷ್ಕೃತ್ಯ ನಡೆಸಲಾಗಿದ್ದರೂ, ಪೊಲೀಸ್ ಇಲಾಖೆ ಸಂಘಪರಿವಾರದ ಕಿಡಿಗೇಡಿಗಳ ವಿರುದ್ಧ ಯಾವುದೇ ಕ್ರಮ ಜರಗಿಸಿಲ್ಲ. ಕೋಮು ಭಾವನೆ ಕೆರಳಿಸುವ ಉದ್ದೇಶದಿಂದ ಮಸ್ಜಿದ್ ವಿರುದ್ಧ ಭಿತ್ತಿಪತ್ರ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಈಗಾಗಲೇ ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ. ಹಾಗೆಯೇ ಸಮಾಜಘಾತುಶಕ್ತಿಗಳು ಕೋಮು ಪ್ರಚೋದನಾಕಾರಿ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ರೀತಿ ಪರಿಸ್ಥಿತಿ ಬಿಗಡಾಯಿಸುವ ಸನ್ನಿವೇಶ ಸೃಷ್ಟಿಯಾಗಿದ್ದರೂ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಆತಂಕಕಾರಿಯಾಗಿದೆ.

- Advertisement -

ಶ್ರೀರಂಗಪಟ್ಟಣ ಒಂದು ಐತಿಹಾಸಿಕ ಸ್ಥಳವಾಗಿದ್ದು, ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಮಸ್ಜಿದ್ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ಮಸ್ಜಿದ್ ಅನ್ನು ವಿರೂಪಗೊಳಿಸಿ ವಿವಾದಕ್ಕೊಳಪಡಿಸಲಾಗುತ್ತಿದ್ದು, ಇದನ್ನು ತಡೆಯಲು ಆಡಳಿತ ವ್ಯವಸ್ಥೆ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಸಂಘಪರಿವಾರದಿಂದ ಬೆದರಿಕೆ ಎದುರಿಸುತ್ತಿರುವ ಈ ಮಸ್ಜಿದ್ ಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಬೇಕು ಮತ್ತು ದುಷ್ಕರ್ಮಿಗಳ ದಾಳಿಯನ್ನು ತಡೆಗಟ್ಟಲು ಮಸ್ಜಿದ್ ಪರಿಸರದಲ್ಲಿ ಕೂಡಲೇ ಸಿಸಿಟಿವಿ ಅಳವಡಿಸಬೇಕು. ಅದರೊಂದಿಗೆ ಐತಿಹಾಸಿಕ ಸ್ಥಳವನ್ನು ಸಂರಕ್ಷಿಸಲು ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಬೇಕೆಂದು ಎ.ಕೆ.ಅಶ್ರಫ್ ಒತ್ತಾಯಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp