ಬಿಜೆಪಿಯ ‘ಲವ್ ಜಿಹಾದ್’ ಹೇಳಿಕೆ ಹಾಸ್ಯಾಸ್ಪದ: PFI ರಾಜ್ಯಾಧ್ಯಕ್ಷ ಯಾಸಿರ್ ಹಸನ್

Prasthutha|

ಬೆಂಗಳೂರು : ದೇಶದಲ್ಲಿ ‘ಲವ್ ಜಿಹಾದ್’ ಅಸ್ತಿತ್ವದಲ್ಲೇ ಇಲ್ಲವೆಂದು ಪೊಲೀಸರು, ತನಿಖಾ ಏಜೆನ್ಸಿಗಳು, ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದ್ದರೂ, ರಾಜ್ಯ ಬಿಜೆಪಿ ಸರಕಾರದ ಭಾಗವಾಗಿರುವ ಮಂದಿ ‘ಲವ್ ಜಿಹಾದ್’ ಕುರಿತು ನೀಡುತ್ತಿರುವ ಹೊಣೆಗೇಡಿ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.

- Advertisement -

ಈ ಮಧ್ಯೆ ‘ಲವ್ ಜಿಹಾದ್’ ಬಗ್ಗೆ ತನಿಖೆ ನಡೆಸಿರುವ ಕೇರಳ ಹಾಗೂ ಕರ್ನಾಟಕದ ಪೊಲೀಸರು ಇಂತಹ ಆರೋಪ ನಿರಾಧಾರ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ‘ಲವ್ ಜಿಹಾದ್’ ಎಂಬುದು ಸಮಾಜದಲ್ಲಿ ಧಾರ್ಮಿಕ ಧ್ರುವೀಕರಣ ನಡೆಸಲು ಬಲಪಂಥೀಯ ಹಿಂದುತ್ವ ಶಕ್ತಿಗಳು ಪ್ರಾರಂಭಿಸಿದ ಭೀಕರ ಹಾಗೂ ದುರಾಲೋಚನೆಯ ಪರಿಣಾಮಗಳಿಂದ ನಡೆಸಿದ ಕೆಡುಕಿನ ಅಭಿಯಾನವಾಗಿದೆ ಎಂದು ಎನ್ಐಎ ತನಿಖೆ ಧೃಡಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರದ ಬಿಜೆಪಿ ಸರಕಾರವೂ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿಲ್ಲ ಎಂಬ ಲಿಖಿತ ಉತ್ತರವನ್ನು ಸಂಸತ್ತಿಗೆ ನೀಡಿತ್ತು. ಆದಾಗ್ಯೂ, ರಾಜ್ಯದ ಬಿಜೆಪಿ ನಾಯಕರು ಕಲ್ಪಿತ ‘ಲವ್ ಜಿಹಾದ್’ಗೆ ಮತ್ತೆ ಜೀವ ತುಂಬಿ ತಮ್ಮ ವಿಭಜನಕಾರಿ ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

ಅಸಂವಿಧಾನಿಕ ಮತಾಂತರ ನಿಷೇಧ ಕಾಯ್ದೆ ತರುವ ಕುರಿತು ರಾಜ್ಯದ ಮುಖ್ಯಮಂತ್ರಿ ಮತ್ತು ಇತರ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಾಸ್ತವದಲ್ಲಿ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನವು ನಾಗರಿಕರಿಗೆ ಖಾತರಿಪಡಿಸಿದ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ. ಇಲ್ಲದ ‘ಲವ್ ಜಿಹಾದ್’ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತಿ ಸೃಷ್ಟಿಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಂದಿರ ನಿರ್ಮಾಣ, ಗೋಹತ್ಯೆ, ಘರ್ ವಾಪ್ಸಿಯಂತೆ ‘ಲವ್ ಜಿಹಾದ್’ ಕೂಡ ಬಿಜೆಪಿಯ ಭಾವನಾತ್ಮಕ ರಾಜಕೀಯದ ಅಸ್ತ್ರವಾಗಿದೆ. ಸಂಘಪರಿವಾರವು 2009ರಲ್ಲಿ ಚಾಲ್ತಿಗೆ ತಂದ ಕಪೋಲಕಲ್ಪಿತ ಲವ್ ಜಿಹಾದ್, ಧರ್ಮಗಳ ಮಧ್ಯೆ ಪರಸ್ಪರ ಅಪನಂಬಿಕೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಯಾಸಿರ್ ಹಸನ್ ಹೇಳಿದ್ದಾರೆ.

ಬಿಜೆಪಿ-ಸಂಘಪರಿವಾರದ ದ್ವೇಷಪೂರಿತ ಮತ್ತು ಕೋಮುಧ್ರುವೀಕರಣದ ರಾಜಕೀಯದ ವಿರುದ್ಧ ಜಾಗೃತರಾಗಬೇಕು ಮತ್ತು ಈ ಕೋಮುವಾದಿ ಮತಾಂಧ ಫ್ಯಾಶಿಸ್ಟರ ಎಲ್ಲಾ ಷಡ್ಯಂತ್ರಗಳನ್ನು ವಿಫಲಗೊಳಿಸಲು ರಾಜ್ಯದ ಜನತೆ ಮುಂದೆ ಬರಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.      

Join Whatsapp