ಉತ್ತರ ಪ್ರದೇಶ ಪೊಲೀಸರು ತನ್ನ ಕಾರ್ಯಕರ್ತರಾದ ಅನ್ಶದ್ ಮತ್ತು ಫಿರೋಝ್ ಎಂಬವರನ್ನು ಬಂಧಿಸಿ ಭಯೋತ್ಪಾದಕ ದಾಳಿಯ ಕಾಲ್ಪನಿಕ ಕಟ್ಟುಕಥೆಯನ್ನು ಸೃಷ್ಟಿಸುತ್ತಿರುವ ಷಡ್ಯಂತ್ರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಅವರು ಪ್ರಕಟಿಸಿರುವ ಪತ್ರಿಕಾ ಪ್ರಕಟನೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಇವರಿಬ್ಬರೂ ಕೇರಳ ನಿವಾಸಿಗಳಾಗಿದ್ದಾರೆ ಮತ್ತು ಸಂಘಟನೆಯ ವಿಸ್ತರಣಾ ಕಾರ್ಯಗಳಿಗಾಗಿ ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ತೆರಳಿದ್ದರು. ಫೆಬ್ರವರಿ 11ರ ಬೆಳಗ್ಗೆ 5:40ಕ್ಕೆ ಇಬ್ಬರು ಕೂಡ ಬಿಹಾರದ ಕಟಿಹಾರ್ ನಿಂದ ಮುಂಬೈಗೆ ತೆರಳಲು ರೈಲು ಹತ್ತಿದ್ದರು. ಅವರ ಕುಟುಂಬ ಸದಸ್ಯರ ಪ್ರಕಾರ, ಫೆಬ್ರವರಿ 11ರ ಸಂಜೆ ಅವರು ಕೊನೆಯದಾಗಿ ತಮ್ಮನ್ನು ಸಂಪರ್ಕಿಸಿದ್ದರು. ನಂತರ ಅವರ ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಅವರ ಕುಟುಂಬಿಕರು ಫೆಬ್ರವರಿ 11ರ ಬೆಳಗ್ಗೆ ಕೇರಳದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕುಟುಂಬಸ್ಥರು ದೂರು ದಾಖಲಿಸಿದ ಬಳಿಕ ಯುಪಿ ಎಸ್.ಟಿ.ಎಫ್. ತರಾತುರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು ಅವರ ಪ್ರಾಯೋಜಿತ ಬಂಧನ ಮತ್ತು ಅವಾಸ್ತವಿಕ ಭಯೋತ್ಪಾದಕ ದಾಳಿಯ ಕಥೆಯನ್ನು ಪ್ರಸ್ತುತಪಡಿಸಿತು. ತಮ್ಮ ಅಕ್ರಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳಲು ಯುಪಿ ಪೊಲೀಸರಿಂದ ಸೃಷ್ಟಿಸಲಾದ ಕಟ್ಟುಕಥೆಯು ಚಲನಚಿತ್ರದ ಸ್ಕ್ರಿಪ್ಟ್ ನಂತಿದೆ ಎಂದು ಅವರು ತಿಳಿಸಿದ್ದಾರೆ.
ಯುಪಿ ಪೊಲೀಸರು ಫೆಬ್ರವರಿ 11ರಂದು ಅನ್ಶದ್ ಮತ್ತು ಫಿರೋಝ್ ರನ್ನು ಬಂಧಿಸಿರುವುದು ಮತ್ತು ಫೆಬ್ರವರಿ 16ರಂದು ಮಾಧ್ಯಮದ ಮುಂದೆ ಅವರನ್ನು ಹಾಜರುಪಡಿಸಿರುವ ವಿಚಾರವು “ರಾಷ್ಟ್ರೀಯ ಭದ್ರತೆಗೆ ಬೆದರಿಕೆ”ಯ ಸುಳ್ಳು ಕಥೆಯನ್ನು ಸೃಷ್ಟಿಸುವ ಯುಪಿ ಸರಕಾರದ ಮತ್ತೊಂದು ಪ್ರಯತ್ನವಾಗಿದೆ. ಫೆಬ್ರವರಿ 11ರ ಸಂಜೆ ರೈಲುಗಾಡಿ ಉತ್ತರ ಪ್ರದೇಶದ ಮೂಲಕ ಚಲಿಸುತ್ತಿತ್ತು. ಇಬ್ಬರನ್ನೂ ಯುಪಿ ಎಸ್.ಟಿ.ಎಫ್ ಯಾವುದೋ ರೈಲ್ವೇ ನಿಲ್ದಾಣದಿಂದ ಅಪಹರಿಸಿದ್ದಿರಬಹುದು ಮತ್ತು ಅವರನ್ನು ಅಕ್ರಮ ಬಂಧನಕ್ಕೊಳಪಡಿಸಿ ಚಿತ್ರಹಿಂಸೆ ನೀಡಿರಬಹುದು ಎಂಬುದು ಇದೀಗ ಸ್ಟಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಎಲ್ಲಾ ವಿರೋಧಿ ಧ್ವನಿಗಳನ್ನು ನಿಗ್ರಹಿಸುವ ಗುರಿ ಹೊಂದಿದೆ. ಸ್ವತಃ ಮುಖ್ಯಮಂತ್ರಿ ಕೂಡ ಪಾಪ್ಯುಲರ್ ಫ್ರಂಟ್ ಅನ್ನು ಗುರಿಯಾಗಿಸುವ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ನೇತೃತ್ವದ ಫ್ಯಾಶಿಸ್ಟ್ ಸರ್ಕಾರವು ಈ ಹಿಂದೆ ರಾಜ್ಯದ ಪಾಪ್ಯುಲರ್ ಫ್ರಂಟ್ ಅಡೋಕ್ ಕಮಿಟಿ ಸದಸ್ಯರನ್ನು ಸಿಎಎ ವಿರೋಧಿ ಪ್ರತಿಭಟನೆಯ ಹಿಂಸಾಚಾರದ ಸೂತ್ರಧಾರರು ಎಂದು ಬಿಂಬಿಸಲು ಪ್ರಯತ್ನಿಸಿತ್ತು. ಆದರೆ ಬಳಿಕ ಇದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಪೊಲೀಸರು ವಿಫಲರಾಗಿದ್ದರು. ಇದರ ಪರಿಣಾಮ ಪಾಪ್ಯುಲರ್ ಫ್ರಂಟ್ ಅಡೋಕ್ ಕಮಿಟಿ ಸದಸ್ಯರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ತಿಳಿಸಿದ್ದಾರೆ.
ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಸಂಘಟನೆಯ ಮೂವರು ಕಾರ್ಯಕರ್ತರು ಮತ್ತು ಪತ್ರಕರ್ತರೊಬ್ಬರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು, ಹತ್ರಾಸ್ ನಲ್ಲಿ “ಜಾತಿ ಹಿಂಸಾಚಾರದ ಪ್ರಚೋದನೆ”ಯ ಸುಳ್ಳು ಆರೋಪವನ್ನು ಪಾಪ್ಯುಲರ್ ಫ್ರಂಟ್ ಮೇಲೆ ಹೊರಿಸಲು ಪ್ರಯತ್ನಿಸಿದರು.
ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಂತಹ ಬೆದರಿಕೆಗಳಿಗೆ ಪಾಪ್ಯುಲರ್ ಫ್ರಂಟ್ ಶರಣಾಗುವುದಿಲ್ಲ. ಈ ಪ್ರಕರಣದಲ್ಲಿ ಎಸ್.ಟಿ.ಎಫ್ ಸ್ವತಃ ಅಪರಾಧಿ ಸ್ಥಾನದಲ್ಲಿರುವುದರಿಂದ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ತನ್ನ ಸದಸ್ಯರನ್ನು ಬಿಡುಗಡೆಗೊಳಿಸಲು ಪಾಪ್ಯುಲರ್ ಫ್ರಂಟ್ ಎಲ್ಲಾ ಕಾನೂನು ಮತ್ತು ಸಾಂವಿಧಾನಿಕ ವಿಧಾನಗಳನ್ನು ಬಳಸಿಕೊಳ್ಳುತ್ತದೆ. ಮಾತ್ರವಲ್ಲದೆ ಬಿಜೆಪಿ ಮತ್ತು ಆರ್ ಎಸ್ ಎಸ್ ನ ದುಷ್ಕೃತ್ಯದ ಸಂಚುಗಳನ್ನು ವಿಫಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.