ಜಾತ್ಯತೀತರು ಒಂದಾದರೆ ಸರಕಾರ ಮಂಡಿಯೂರಲೇ ಬೇಕು : ಯಾಸಿರ್ ಹಸನ್

Prasthutha|

ಮಂಗಳೂರು : ಜಾತ್ಯತೀತರು ಒಂದಾಗಿ ಹೋರಾಟಕ್ಕಿಳಿದರೆ, ಸರಕಾರ ಮಂಡಿಯೂರಲೇ ಬೇಕು ಎಂದು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಎಚ್ಚರಿಕೆ ನೀಡಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ‘ED ಆರೆಸ್ಸೆಸ್ ಅಸ್ತ್ರವಾಗುವುದನ್ನು ತಡೆಯೋಣ’ ರಾಷ್ಟ್ರವ್ಯಾಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

- Advertisement -

ಪಾಪ್ಯುಲರ್ ಫ್ರಂಟ್ ಸಂಘಟನೆ NRC – CAA ವಿರೋಧಿ ಹೋರಾಟದ ಮುಂಚೂಣಿಯಲ್ಲಿತ್ತು. ಈ ಕಾರಣಕ್ಕಾಗಿ ಬಿಜೆಪಿ ಸರಕಾರ ED ಯನ್ನು ಕಳುಹಿಸಿ ನಮ್ಮನ್ನು ಬೆದರಿಸಲೆತ್ನಿಸುತ್ತಿದೆ. ಆದರೆ ಶಾಹೀನ್ ಬಾಗ್ ಹೋರಾಟದಲ್ಲಿ ನಮ್ಮ ಸಮುದಾಯದ ಕೇವಲ ಮುನ್ನೂರು ಮಹಿಳೆಯರು ಮೂರು ತಿಂಗಳುಗಳ ಕಾಲ ದೇಶದ ರಾಜಧಾನಿಯಲ್ಲಿ  ನಿಮ್ಮ ಉಸಿರುಗಟ್ಟಿಸಿದ್ದರು ಎಂಬುದನ್ನು ಬಿಜೆಪಿ ಸರಕಾರ ತಿಳಿದುಕೊಳ್ಳಬೇಕು. ಮುಂದೆ ಪಾಪ್ಯುಲರ್ ಫ್ರಂಟ್ ನ ಸಾವಿರಾರು ಕಾರ್ಯಕರ್ತರು, ರೈತ ಹೋರಾಟಗಾರರು, ದಲಿತರು, ಅಲ್ಪಸಂಖ್ಯಾತರು ಮತ್ತು ಫ್ಯಾಶಿಸ್ಟ್ ವಿರೋಧಿ ಜಾತ್ಯತೀತರು ಒಂದಾಗಿ ಹೋರಾಟಕ್ಕಿಳಿದರೆ ನೀವು ಮಂಡಿಯೂರಲೇಬೇಕು ಎಂದು ಅವರು ತಿಳಿಸಿದರು.

ED ಅಧಿಕಾರಿಗಳೇ, ನೀವು ಮಾಡುವುದಾದರೆ ಭ್ರಷ್ಟ ಅಧಿಕಾರಿಗಳ, ಸಚಿವರುಗಳ ಮತ್ತು ಭ್ರಷ್ಟ ರಾಜಕಾರಣಿಗಳ ಬಂಗ್ಲೆಗಳಿಗೆ ಮತ್ತು ಕಚೇರಿಗಳಿಗೆ ದಾಳಿ ನಡೆಸಿ. ಅದು ಬಿಟ್ಟು ದೇಶಾದ್ಯಂತ ಪ್ರತಿಯೊಂದು ಪ್ರಜೆಯ ನೋವಿಗೆ ಜಾತಿ ಧರ್ಮ ನೋಡದೆ ಸ್ಪಂಧಿಸುತ್ತಿರುವ ಪಾಪ್ಯುಲರ್ ಫ್ರಂಟ್ ಕಚೇರಿಗೆ 10 ಬಾರಿ ದಾಳಿ ನಡೆಸಿದರೂ ನಿಮಗೇನೂ ಸಿಗದು. ನಿಮ್ಮ ಸಮಯವನ್ನು ವ್ಯರ್ಥಗೊಳಿಸಬೇಡಿ ಎಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಅಶ್ರಫ್ ಕೆ. ಹೇಳಿದರು.

- Advertisement -

ED ದಾಳಿಗಳು ಸಂವಿಧಾನ ವಿರೋಧಿ ಕೃತ್ಯಗಳನ್ನು ಎಸಗಿದ್ದಾರೆಂಬ ಆರೋಪದಲ್ಲಿ ನಡೆಯುತ್ತಿದೆ. ಇಲಾಖೆ ಈಗ ಅಮಿತ್ ಶಾರ ತೊಗಲು ಗೊಂಬೆಯಂತೆ ವರ್ತಿಸುತ್ತಿದೆ. ಆದರೆ ನಮ್ಮ ಸಂವಿಧಾನಾತ್ಮಕ, ನ್ಯಾಯಪರ ಹೋರಾಟಗಳನ್ನು ಇಂತಹ ದ್ವೇಷ ಸಾಧನೆಯ ಮೂಲಕ ಅಡಗಿಸಲಾಗದು ಎಂದು ರಾಜ್ಯ ಕಾರ್ಯದರ್ಶಿ ಅಶ್ರಫ್ ಎ. ಕೆ. ತಿಳಿಸಿದರು.

ರಾಜ್ಯ ಕಾರ್ಯದರ್ಶಿ ಶರೀಫ್ ಬಜ್ಪೆ, ದ.ಕ. ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ‘ED ಆರೆಸ್ಸೆಸ್ ಅಸ್ತ್ರವಾಗುವುದನ್ನು ತಡೆಯೋಣ’ ಪ್ರತಿಭಟನೆ ಇಂದು ರಾಷ್ಟ್ರಾದ್ಯಂತ ನಡೆದಿದೆ.   



Join Whatsapp