ತಿರುವನಂತಪುರಂ: ಸೆಪ್ಟೆಂಬರ್ ನಲ್ಲಿ ನಡೆದ ಹರತಾಳದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾದ ಹಾನಿಗಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್’ಐ) ವಿರುದ್ಧ ವಸೂಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ನ್ಯಾಯಾಲಯದ ನಿರ್ದೇಶನವನ್ನು ಜಾರಿಗೆ ತರಲು ವಿಫಲವಾದಕ್ಕಾಗಿ ಕೇರಳ ಸರ್ಕಾರ ಶುಕ್ರವಾರ ಕೇರಳ ಹೈಕೋರ್ಟ್ ಮುಂದೆ ಬೇಷರತ್ ಕ್ಷಮೆಯಾಚಿಸಿದೆ.
ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಮುಹಮ್ಮದ್ ನಿಯಾಸ್ ಸಿಪಿ ಅವರ ವಿಭಾಗೀಯ ಪೀಠವು ನ್ಯಾಯಾಂಗದ ಬಗ್ಗೆ ಕಾರ್ಯಾಂಗದ ಗ್ರಹಿಕೆ ಬದಲಾಗಬೇಕು ಮತ್ತು ನ್ಯಾಯಾಂಗವನ್ನು ಸರ್ಕಾರದ ಮತ್ತೊಂದು ಇಲಾಖೆ ಎಂದು ಪರಿಗಣಿಸಬಾರದು. ನಾವು ಸಮಾಲೋಚನೆ ನಡೆಸಿ ನಂತರ ಸಹಭಾಗಿತ್ವದಿಂದ ಕೆಲಸ ಮಾಡಬೇಕು ಎಂದು ಒತ್ತಿಹೇಳಿದೆ.
ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಸೆಪ್ಟೆಂಬರ್ 23 ರಂದು ಪಿಎಫ್’ಐ ಸದಸ್ಯರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಪಿಎಫ್’ಐ ಪ್ರತಿಭಟನಕಾರರು ಕೊಲ್ಲಂ, ತ್ರಿಶೂರು, ಕಣ್ಣೂರು, ಕೊಝಿಕ್ಕೋಡ್, ವಯನಾಡ್, ತಿರುವನಂತಪುರಂ, ಅಲಪ್ಪುಝ, ಪಂಥಲಂನಲ್ಲಿ ಬಸ್ಸುಗಳ ಗಾಜುಗಳನ್ನು ಒಡೆದಿದ್ದರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಹರತಾಳದ ಸಮಯದಲ್ಲಿ ತನ್ನ ಬಸ್’ಗಳಿಗೆ ಉಂಟಾದ ಹಾನಿಗೆ ಪಿಎಫ್’ಐನಿಂದ 5.06 ಕೋಟಿ ಪರಿಹಾರ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಕಳೆದ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು 5.20 ಕೋಟಿ ವಸೂಲಾತಿಯನ್ನು ವಿಳಂಬಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಡಾ.ವೇಣು ಅವರು ಅಂದಾಜು ಮಾಡಿದ ಹಾನಿಗಳನ್ನು ಮರುಪಡೆಯಲು ಸಮಯದ ಮಿತಿಯನ್ನು ವಿವರಿಸುವ ಅಫಿಡವಿಟ್’ನೊಂದಿಗೆ ವೈಯಕ್ತಿಕವಾಗಿ ಹಾಜರಾಗುವಂತೆ ನಿರ್ದೇಶಿಸಿತು.
ಇಂದು, ನ್ಯಾಯಾಲಯವು ಡಾ. ವೇಣು ಅವರಿಗೆ ನ್ಯಾಯಾಲಯದ ಪ್ರತಿಯೊಂದು ನಿರ್ದೇಶನಗಳ ಗಂಭೀರತೆ ಮತ್ತು ಸಮಯೋಚಿತ ರೀತಿಯಲ್ಲಿ ಅವುಗಳನ್ನು ಪಾಲಿಸುವ ಪ್ರಾಮುಖ್ಯತೆಯ ಬಗ್ಗೆ ತಮ್ಮ ಕೆಳಗಿನ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೇಳಿಕೊಂಡಿದ್ದಾರೆ.