ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿರುವ ನಮಾಝ್ ನಿರ್ವಹಿಸುವ ಕೋಣೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ ಸೈಯ್ಯದ್ ಜಾವೇದ್ ಆಗ್ರಹಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಸರ್ವ ಧರ್ಮೀಯರಿಗೂ ಪ್ರತ್ಯೇಕವಾಗಿ ಪ್ರಾರ್ಥನೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಈ ವಿಚಾರವನ್ನು ಸ್ವತಃ ರೈಲ್ವೇ ಅಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಕಳೆದ 35 ವರ್ಷಗಳಿಂದ ಎಲ್ಲರೂ ತಮ್ಮ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಹಿಂದುತ್ವವಾದಿ ಶಕ್ತಿಗಳು ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುವ ನಿಟ್ಟಿನಲ್ಲಿ ನಮಾಝ್ ಗೆ ಮೀಸಲಿರಿಸಿದ್ದ ಕೋಣೆಗೆ ದಾಳಿ ನಡೆಸಿ ಗೂಂಡಾಗಿರಿ ನಡೆಸಿದ್ದಾರೆ. ಅದೂ ಕೂಡ ಪೊಲೀಸರ ಸಮ್ಮುಖದಲ್ಲೇ ಇಂತಹ ಒಂದು ದುಷ್ಕೃತ್ಯ ನಡೆದಿರುವುದು ಕಳವಳಕಾರಿ. ರಾಜ್ಯದಲ್ಲಿ ಹಿಂದು-ಮುಸ್ಲಿಮರ ನಡುವೆ ಒಡಕುಂಟು ಮಾಡಲು ಸಂಘಪರಿವಾರದ ಮತಾಂಧ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿವೆ. ಇದೀಗ ರೈಲ್ವೇ ನಿಲ್ದಾಣದಲ್ಲಿ ನಡೆದಿರುವ ಘಟನೆಯೂ ಸಂಘಪರಿವಾರದ ಹೀನ ಮನೋಸ್ಥಿತಿಯ ಭಾಗವಾಗಿದೆ. ಸಂಘಪರಿವಾರದ ದುಷ್ಕೃತ್ಯಗಳ ವಿರುದ್ಧ ಆಡಳಿತ ವ್ಯವಸ್ಥೆಯ ಮೃದು ಧೋರಣೆಯೂ ಇಂತಹ ಘಟನೆಗಳಿಗೆ ನೇರ ಕಾರಣವಾಗಿದೆ.
ನಮಾಝ್ ಕೊಠಡಿಗೆ ನುಗ್ಗಿ ಕೋಲಾಹಲ ಸೃಷ್ಟಿಸಿದ ಗೂಂಡಾಗಳ ವಿರುದ್ಧ ಕಠಿಣ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ರೈಲ್ವೇ ನಿಲ್ದಾಣದಲ್ಲಿರುವ ಎಲ್ಲಾ ಪ್ರಾರ್ಥನಾ ಕೊಠಡಿಗಳಿಗೂ ಸರಕಾರ ಕೂಡಲೇ ಪೊಲೀಸ್ ಭದ್ರತೆ ಒದಗಿಸಬೇಕು. ಇಂತಹ ಪುಂಡ ಪೋಕರಿಗಳನ್ನು ಮಟ್ಟ ಹಾಕಿ ಶಾಂತಿ, ಸಾಮಾರಸ್ಯ ಕಾಪಾಡಲು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತವಾಗಬೇಕೆಂದು ಸೈಯ್ಯದ್ ಜಾವೇದ್ ಒತ್ತಾಯಿಸಿದ್ದಾರೆ.