PFI ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ : ವಾಹೀದ್ ಸೇಠ್

Prasthutha|

ಬೆಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನದ ಅಂಗವಾಗಿ ನಗರದ ರಾಜ್ಯ ಕಚೇರಿಯಲ್ಲಿ ನಡೆದ ಧ್ವಜಾರೋಹಣವನ್ನು ರಾಷ್ಟ್ರೀಯ ಸಮಿತಿ ಸದಸ್ಯ ವಾಹೀದ್ ಸೇಠ್ ನೆರವೇರಿಸಿದರು.

- Advertisement -

ಈ ವೇಳೆ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ವಾಹೀದ್ ಸೇಠ್, ಪಾಪ್ಯುಲರ್ ಫ್ರಂಟ್ ದೇಶದ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವ, ಸೌರ್ವಭೌಮತೆಯನ್ನು ಸಾರುವ ಮತ್ತು ಜನರ ಸಂವಿಧಾನಾತ್ಮಕವಾದ ಎಲ್ಲಾ ಹಕ್ಕುಗಳನ್ನು ಪಡೆಯುವ ಗುರಿಯೊಂದಿಗೆ ಮುಂದೆ ಸಾಗುತ್ತಿದೆ. ಇಂದು ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಆದರೆ ಈ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

ಕಳೆದ 14 ವರ್ಷಗಳಿಂದ ನಿರಂತರವಾಗಿ ಶೋಷಿತ, ದಮನಿತರ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದೇವೆ. ಪ್ರಯಾಣಿಸಬೇಕಾದ ದೂರ ಬಹಳಷ್ಟಿದೆ.

- Advertisement -

ಪಾಪ್ಯುಲರ್ ಫ್ರಂಟ್ ಈ ದೇಶದ ಸಂವಿಧಾನದ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ. ಫ್ಯಾಸಿಸ್ಟ್ ಶಕ್ತಿಗಳು ದೇಶವನ್ನು ಒಡೆಯುವ ನಿರಂತರ ಪ್ರಯತ್ನದಲ್ಲಿವೆ. ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತುವ ಸಂಘಟನೆಗಳನ್ನು ಸರಕಾರಿ ಪ್ರಾಯೋಜಿತ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ದಮನಿಸಲಾಗುತ್ತಿದೆ ಎಂದು ಹೇಳಿದರು.

ಇಂದು ರೈತರು ತಮ್ಮ ಹಕ್ಕುಗಳಿಗಾಗಿ ಬೀದಿಯಲ್ಲಿದ್ದಾರೆ. ಸರಕಾರ ಸರ್ವಾಧಿಕಾರಿ ಧೋರಣೆಯಿಂದ ಜನವಿರೋಧಿ ಕಾನೂನುಗಳನ್ನು ತಂದು ಅವರ ಹಕ್ಕುಗಳನ್ನು ಕಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪಾಪ್ಯುಲರ್ ಫ್ರಂಟ್ ರೈತರ ಹೋರಾಟದಲ್ಲಿ ಸದಾ ಜೊತೆಗಿರುತ್ತೆ ಎಂದು ಹೇಳಿದರು..

ಈ ಹೋರಾಟ ಕೇವಲ ಪಾಪ್ಯುಲರ್ ಫ್ರಂಟ್ ನದ್ದಲ್ಲ, ಕೇವಲ ಮುಸಲ್ಮಾನರದ್ದಲ್ಲ, ಅದು ಇಡೀ ದೇಶದ್ದು. ಇವತ್ತು ಹಿಂದೂಗಳ ವಿರುದ್ಧ, ರೈತರ ವಿರುದ್ಧ ಅಥವಾ ಸರಕಾರದ ವಿರುದ್ಧ ಮಾತನಾಡುವರು ಯಾರೇ ಆಗಿದ್ದರೂ ಅವರ ವಿರುದ್ಧ ದೊಡ್ಡ ದೊಡ್ಡ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಹೀಗಾಗಿ, ಈ ಹೋರಾಟ ಕೇವಲ ಪಿಎಫ್ ಐ ಅಥವಾ ಮುಸ್ಲಿಮರದ್ದಲ್ಲ, ಇಡೀ ದೇಶದ ಹೋರಾಟವಾಗಿದೆ ಎಂಬುದು ನಮಗೆ ಅರ್ಥವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ನಾಯಕರಾದ ಇಲ್ಯಾಸ್ ಬೆಂಗಳೂರು, ಜಿಲ್ಲಾಧ್ಯಕ್ಷ ವಾಜಿದ್ ಬೆಂಗಳೂರು ಉಪಸ್ಥಿತರಿದ್ದರು.



Join Whatsapp