ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ-ಯುಎಪಿಎಯಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ-ಪಿಎಫ್ ಐ ಸಂಘಟನೆಯನ್ನು ನಿಷೇಧಿಸಿದ ಪ್ರಕರಣ ಸಂಬಂಧ ನ್ಯಾಯಮಂಡಳಿಯನ್ನು ರಚಿಸಿರುವ ಕೇಂದ್ರ ಸರ್ಕಾರ, ದೆಹಲಿ ಹೈಕೋರ್ಟ್ ನ್ಯಾಯಾಧೀಶ ದಿನೇಶ್ ಕುಮಾರ್ ಶರ್ಮಾ ಅವರನ್ನು ನ್ಯಾಯಮಂಡಳಿಯ ಪ್ರಿಸೈಡಿಂಗ್ ಆಫೀಸರ್ ಆಗಿ ನೇಮಿಸಿ ಆದೇಶ ಹೊರಡಿಸಿದೆ.
ಪದೋನ್ನತಿ ಪಡೆದ ನಂತರ ನ್ಯಾಯಮೂರ್ತಿ ಶರ್ಮಾ ಅವರನ್ನು ಫೆಬ್ರವರಿ 28, 2022 ರಂದು ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಇದೀಗ ಅವರನ್ನು ನ್ಯಾಯಮಂಡಳಿಯ ಮುಖ್ಯಸ್ಥರಾಗಿ ನೇಮಿಸಲಾಗಿದೆ.
ಯಾವುದೇ ಸಂಘಟನೆಯನ್ನು ನಿಷೇಧಿಸಿದರೆ 30 ದಿನಗಳ ಒಳಗಾಗಿ ಕೇಂದ್ರ ಸರ್ಕಾರ, ನ್ಯಾಯಮಂಡಳಿಯೊಂದನ್ನು ರಚಿಸಬೇಕು. ಆ ನ್ಯಾಯಮಂಡಳಿಯು ನಿರ್ದಿಷ್ಟ ಸಂಘಟನೆಯನ್ನು ನಿಷೇಧಿಸಿರುವುದು ಸರಿಯೇ ಎಂಬುದನ್ನು ಪರಿಶೀಲಿಸಲಿದೆ.
ಯುಎಪಿಎ ಸೆಕ್ಷನ್ 5 ರ ಪ್ರಕಾರ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಮಂಡಳಿ ರಚಿಸಬೇಕು. ಅಧಿಸೂಚನೆಯನ್ನು ಹೊರಡಿಸಿದ ನಂತರ, ನ್ಯಾಯಾಧಿಕರಣವು ನಿಷೇಧಕ್ಕೊಳಗಾದ ಸಂಘಟನೆಗೆ ನೋಟಿಸ್ ನೀಡಿ, ನಿಮ್ಮ ಸಂಘಟನೆಯನ್ನು ಏಕೆ ಕಾನೂನುಬಾಹಿರವೆಂದು ಘೋಷಿಸಬಾರದು ಎಂದು ಪ್ರಶ್ನಿಸುತ್ತದೆ. ಆಗ ಸಂಘಟನೆಯು ವಕೀಲರ ಮೂಲಕ ತಮ್ಮ ವಾದವನ್ನು ನ್ಯಾಯಮಂಡಳಿಯ ಮುಂದೆ ಮಂಡಿಸಬಹುದು.