ಸುಳ್ಳು ಹೇಳಿ ಮೋದಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ : ಹೆಚ್.ಎನ್. ಗೋಪಾಲ ಗೌಡ

Prasthutha|

ಬೆಂಗಳೂರು : ಸುಳ್ಳು ಹೇಳಿ ಮೋದಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಹೆಚ್.ಎನ್. ಗೋಪಾಲಗೌಡ ಆರೋಪಿಸಿದ್ದಾರೆ.

- Advertisement -

ಅವರು ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಯ ವಿರುದ್ಧ ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಹೆಚ್.ಎನ್. ಗೋಪಾಲಗೌಡ ಮಾತನಾಡುತ್ತಾ, ಪ್ರಧಾನಿ ಮೋದಿಯವರ ಸಾಧನೆ ಅದು ಕೇವಲ ಸುಳ್ಳು ಹೇಳಿರುವುದು ಮಾತ್ರ. ಸುಳ್ಳು ಹೇಳಿ ಮೋದಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮೋದಿ ಸರಕಾರ ಬಂದ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಕೊರೋನಾದಿಂದ ಮತ್ತು ರೈತ ಪ್ರತಿಭಟನೆಯಿಂದ ಹಲವರು ಜೀವವನ್ನು ಕಳೆದುಕೊಂಡಿದ್ದರೂ ಪ್ರಧಾನಿ ಮೋದಿ ಅದರ ಬಗ್ಗೆ ಮಾತನಾಡುತ್ತಿಲ್ಲವೆಂದಾದರೆ. ಅದು ಅವರ ಮನುವಾದಿ ಸಿದ್ಧಾಂತವನ್ನು ತೋರಿಸುತ್ತದೆ ಎಂದರು.

- Advertisement -

ಅದಾನಿ, ಅಂಬಾನಿಯನ್ನು ಉದ್ದಾರ ಮಾಡಲು ಮಾತ್ರ ಬಿಜೆಪಿ ಸರಕಾರವಿದೆ. ಬಿಜೆಪಿ ಸರಕಾರದ ವಿರುದ್ಧ ಇಂದು ಬೀದಿಗಿಳಿದು ಹೋರಾಡುವ ಅಗತ್ಯತೆಯಿದೆ. ರೈತರ ಜಮೀನನ್ನು ಬಂಡವಾಳಶಾಹಿಗಳಿಗೆ ಕೊಡಲು ಸರಕಾರ ಹೊರಟಿದೆ. ರೈತರನ್ನು ಮತ್ತು ಕಾರ್ಮಿಕರನ್ನು ಬೀದಿಗೆ ತಂದಿದೆ. ಜನವಿರೋಧಿಯಾಗಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಒಪ್ಪಲು ಸಾಧ್ಯವೇ ಇಲ್ಲ. ಬಿಜೆಪಿಯನ್ನು ನಾವೆಲ್ಲರೂ ಸೇರಿ ತಿರಸ್ಕರಿಸಬೇಕು ಎಂದು ಅವರು ತಿಳಿಸಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಮಾತನಾಡಿ, ಬಿಜೆಪಿ ಸರಕಾರ ಖಾಸಗೀಕರಣದ ಪರವಾಗಿದ್ದು, ಜನವಿರೋಧಿಯಾಗಿದೆ. ದೇಶವನ್ನೇ ಮಾರಾಟಕ್ಕಿಟ್ಟಿದ್ದಾರೆ ಪ್ರಧಾನಿ ಮೋದಿ. ಬಿಎಸ್ಸೆಎನ್ಎಲ್ ಕಂಪನಿಯನ್ನು ಮಾರಾಟಕ್ಕಿಟ್ಟರು. ಸದ್ಯ ರೈಲನ್ನೂ ಮಾರಾಟಕ್ಕಿಟ್ಟಿದ್ದಾರೆ. ಬೆಂಗಳೂರಿನ ಪ್ರತಿಷ್ಢಿತ ಹೆಚ್ಎಎಲ್ ಕಂಪನಿಯನ್ನೂ ಮಾರಾಟ ಮಾಡುವ ಯತ್ನದಲ್ಲಿದ್ದಾರೆ ಎಂದು ಆಪಾದಿಸಿದರು.

ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಾಧ್ಯಕ್ಷರಾದ ಎನ್. ಪ್ರತಾಪ್ ಸಿಂಹ ಮಾತನಾಡಿ, ತಕ್ಷಣ ಬೆಲೆಯೇರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.



Join Whatsapp