ಪೆಟ್ರೋಲ್ ಬೆಲೆ 100 ರೂ. ದಾಟಿದರೂ ಅಮಿತಾಭ್, ಅಕ್ಷಯ್ ಕುಮಾರ್ ಯಾಕೆ ಮಾತನಾಡುತ್ತಿಲ್ಲ : ಕಾಂಗ್ರೆಸ್ ವಾಗ್ದಾಳಿ

Prasthutha|

ಮುಂಬೈ : ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದ್ದರೂ ಬಾಯಿಬಿಡದ ಬಾಲಿವುಡ್ ನಟರ ವಿರುದ್ಧ ಮಹಾರಾಷ್ಟ್ರ ಗರಂ ಆಗಿದೆ. ಯುಪಿಎ ಆಡಳಿತದ ವೇಳೆ ಸಣ್ಣಸಣ್ಣ ವಿಷಯಕ್ಕೂ ಟ್ವೀಟ್ ಮಾಡಿ, ಜನಾಕ್ರೋಶ ಸೃಷ್ಟಿಸುತ್ತಿದ್ದ ಬಾಲಿವುಡ್ ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಳೆ, ಪೆಟ್ರೋಲ್ ಬೆಲೆ 100 ರೂ. ಆಗಿದ್ದರೂ ಯುಪಿಎ ಸರಕಾರವಿದ್ದಾಗ ಆಕ್ರೋಶ ಹೊರಹಾಕಿದ್ದ ಅಮಿತಾಭ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಈಗ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

2012ರಲ್ಲಿ ಮನಮೋಹನ್ ಸಿಂಗ್ ಸರಕಾರವಿದ್ದಾಗ, ಪೆಟ್ರೋಲ್ ಬೆಲೆ ಹೆಚ್ಚಳದ ಬಗ್ಗೆ ಅಮಿತಾಭ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಟ್ವೀಟ್ ಹಂಚಿಕೊಂಡಿರುವ ನಾನಾ, 100 ರೂ.ಗೆ ಪೆಟ್ರೋಲ್ ಮಾರಾಟವಾಗುತ್ತಿದ್ದರೂ, ಈಗೇಕೆ ಇವರು ಬಾಯಿ ಮುಚ್ಚಿಕೊಂಡಿದ್ದಾರೆ. ಇವರ ಮೇಲೆ ಯಾರ ಒತ್ತಡ ಇದೆ ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -

ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಕಚ್ಚಾ ತೈಲ ಬೆಲೆ ವಿಪರೀತ ಹೆಚ್ಚಳವಾಗಿತ್ತು. ಆದರೂ, ಸಿಂಗ್ ಸರಕಾರ ಪೆಟ್ರೋಲ್ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು. ಈಗ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕುಸಿದಿದ್ದರೂ ಏಕೆ ಬೆಲೆ ಈ ಪ್ರಮಾಣದಲ್ಲಿ ಏರಿದೆ?. ಜನ ಸಾಮಾನ್ಯರ ಟಿಕೆಟ್ ದುಡ್ಡಿನಿಂದ ಬದುಕುವ ಈ ನಟರು ಏಕೆ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ? ಎಂದು ನಾನಾ ಕೇಳಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಅಮಿತಾಭ್ ಬಚ್ಚನ್ ರ ಈ ಇಬ್ಬಗೆಯ ನೀತಿ ಖಂಡಿಸುತ್ತೇವೆ. ಮುಂಬರುವ ದಿನಗಳಲ್ಲಿ ಈ ಇಬ್ಬರೂ ನಟರ ಚಿತ್ರಗಳ ಶೂಟಿಂಗ್ ಗೆ ಮಹಾರಾಷ್ಟ್ರದಲ್ಲಿ ಅವಕಾಶ ನೀಡಲ್ಲ ಎಂದು ನಾನಾ ಎಚ್ಚರಿಕೆ ನೀಡಿದ್ದಾರೆ.   



Join Whatsapp