ಅಚ್ಛೇ ದಿನ್ ! | ರಾಜ್ಯದಲ್ಲೂ 90 ರೂ. ಗಡಿ ದಾಟಿತು ಪೆಟ್ರೋಲ್ ಬೆಲೆ; ಮ.ಪ್ರ.ದ ಅನುಪುರದಲ್ಲಿ 100 ರೂ. ಗಡಿ ತಲುಪಲು ಇನ್ನು 2 ರೂ.ಯಷ್ಟೇ ಬಾಕಿ!

Prasthutha|

ನವದೆಹಲಿ : ಹಿಂದೆಲ್ಲಾ ಪೆಟ್ರೋಲ್, ಡೀಸೆಲ್ ಬೆಲೆ ವರ್ಷಕ್ಕೊಮ್ಮೆ ಲೀಟರ್ ಗೆ 50 ಪೈಸೆ, 1 ರೂ. ಏರಿಕೆಯಾದರೂ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದವು, ಭಾರತ ಬಂದ್ ಕೂಡ ಆಗುತ್ತಿತ್ತು. ಆದರೆ, ಈಗ ದಿನನಿತ್ಯ ಮನಬಂದಂತೆ ಪೆಟ್ರೋಲ್ ಬೆಲೆ ಹೆಚ್ಚುತ್ತಿದ್ದರೂ, ಪ್ರತಿಪಕ್ಷಗಳೂ ಸಹಿತ ಯಾರೊಬ್ಬರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ‘ಅಚ್ಛೇ ದಿನ್’ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದ ಬಹುತೇಕ ನಗರಗಳಲ್ಲಿ ಇದೀಗ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 90ರ ಗಡಿ ದಾಟಿದೆ.

- Advertisement -

ಬುಧವಾರ ಪೆಟ್ರೋಲ್ ಬೆಲೆ ಲೀಟರ್ ಗೆ 70 ಪೈಸೆ ಏರಿಕೆಯಾಗುವ ಮೂಲಕ, ಕರ್ನಾಟಕದಲ್ಲೂ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 90ರ ಗಡಿ ದಾಟಿದೆ. ಮಧ್ಯಪ್ರದೇಶದ ಅನುಪುರದಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಗೆ ರೂ.100ರ ಗಡಿ ದಾಟಲು ಕೇವಲ 2 ರೂ.ಯಷ್ಟೇ ಬಾಕಿಯಿದೆ.

ಮುಂಬೈಯಲ್ಲಿ ಇಂದಿನ ಏರಿಕೆಯ ಬಳಿಕ ಪೆಟ್ರೋಲ್ ಬೆಲೆ 94.12 ರೂ. ಮತ್ತು ಡೀಸೆಲ್ ಬೆಲೆ ಲೀಟರ್ ಗೆ 84.63 ರೂ. ಆಗಿದೆ.

- Advertisement -

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 90.53 ರೂ. ಆಗಿದ್ದರೆ, ಡೀಸೆಲ್ ಬೆಲೆ ಲೀಟರ್ ಗೆ 82.40 ರೂ. ಆಗಿದೆ.

ಭೋಪಾಲದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 95.52 ರೂ, ಡೀಸೆಲ್ ಬೆಲೆ 85.78 ರೂ. ಆಗಿದೆ. ಜೈಪುರದಲ್ಲಿ ಪೆಟ್ರೋಲ್ 94.12 ರೂ. ಮತ್ತು ಡೀಸೆಲ್ 85.95 ರೂ, ಪಾಟ್ನಾದಲ್ಲಿ 90.03 ರೂ., ಡೀಸೆಲ್ 82.92 ರೂ. ಆಗಿದೆ.

ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಬಹುತೇಕ ಎಲ್ಲಾ ನಗರಗಳಲ್ಲಿ ಪೆಟ್ರೋಲ್ ಬೆಲೆ ರೂ.90ರ ಗಡಿ ದಾಟಿ ಎಷ್ಟೋ ದಿನಗಳಾಗಿದ್ದು, ಶೀಘ್ರದಲ್ಲೇ ಲೀಟರ್ ಗೆ ರೂ.100ರ ಗಡಿ ತಲುಪುವತ್ತ ಪೈಪೋಟಿಯಲ್ಲಿ ತೊಡಗಿರುವಂತಿದೆ.

ಮಧ್ಯಪ್ರದೇಶದ ಅನುಪುರದಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಗೆ 97.83 ರೂ. ಆಗಿದೆ. ಇದು ಲೀಟರ್ ಗೆ ರೂ. 100ರ ಗಡಿ ತಲುಪಲು ಇನ್ನು ಕೇವಲ ರೂ. 2.17 ಮಾತ್ರ ಬಾಕಿಯಿದೆ.

ಇತ್ತೀಚೆಗೆ ಕಾಂಗ್ರೆಸ್ ಆಡಳಿತದ ರಾಜಸ್ಥಾನದ ಗಂಗಾನಗರದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ರೂ.101 ಆಗಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಮುಖ್ಯವಾಹಿನಿ ಮಾಧ್ಯಮಗಳು ಪೆಟ್ರೋಲ್ ಬೆಲೆ ಏರಿಕೆ ರಾಜ್ಯಗಳ ಸಮಸ್ಯೆ ಎಂಬಂತೆ ಬಿಂಬಿಸಲು ಈ ಸುದ್ದಿಯನ್ನು ದೊಡ್ಡದಾಗಿಸಿದ್ದವು. ಪ್ರೀಮಿಯಂ ಪೆಟ್ರೋಲ್ ಬೆಲೆ ರೂ. 100ರ ಗಡಿ ದಾಟಿದ್ದ ರಾಜಸ್ಥಾನದ ಗಂಗಾನಗರದ ಇಂದಿನ ಸಾಮಾನ್ಯ ಪೆಟ್ರೋಲ್ ಬೆಲೆ 98.34 ರೂ. ಇದೆ.

ಮಧ್ಯಪ್ರದೇಶದ ಅನುಪುರದ ಪ್ರೀಮಿಯಂ ಪೆಟ್ರೋಲ್ ದರ ಎಷ್ಟೆಂದು ತಿಳಿದುಬಂದಿಲ್ಲ. ಆದರೆ, ಸಾಮಾನ್ಯ ಪೆಟ್ರೋಲ್ ದರ ರಾಜಸ್ಥಾನದ ಗಂಗಾನಗರದ ಪೆಟ್ರೋಲ್ ದರಕ್ಕಿಂತ ಹೆಚ್ಚಾಗಿದೆ. ಮಧ್ಯಪ್ರದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ರೂ.95ರ ಗಡಿ ದಾಟಿ ಹಲವು ದಿನಗಳಾಗಿವೆ. ಆದರೆ, ಮುಖ್ಯವಾಹಿನಿ ಮಾಧ್ಯಮಗಳು ಈ ಬಗ್ಗೆ ಬೆಳಕು ಚೆಲ್ಲುತ್ತಿಲ್ಲ.  



Join Whatsapp