ನಿರಂತರವಾಗಿ ಏರಿಕೆಯಾಗುತ್ತಿರುವ ಇಂಧನ ಮೇಲಿನ ಪರೋಕ್ಷ ತೆರಿಗೆಯನ್ನು ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಕ್ಕೆ ವಿನಂತಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಅನ್ನು ಸಮಂಜಸ ಬೆಲೆಗೆ ಇಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಅನಿಯಂತ್ರಕವಾದ ಏರಿಕೆ ಕಂಡುಬರುತ್ತಿದೆ. ಈ ಕುರಿತು ರಿಸರ್ವ್ ಬ್ಯಾಂಕ್ ಗವರ್ನರ್ ಮಾತನಾಡುತ್ತಾ, “ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಹಣದುಬ್ಬರ ಪರಿಣಾಮ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚಿನ ಪರೋಕ್ಷ ತೆರಿಗೆ ದರಗಳಿಂದಾಗಿ ಆಹಾರ ಮತ್ತು ಇಂಧನವನ್ನು ಹೊರತುಪಡಿಸಿ ಗ್ರಾಹಕ ಸೂಚ್ಯಂಕ ಬೆಲೆಯ (CPI) ಹಣದುಬ್ಬರವು ಡಿಸೆಂಬರ್‌ನಲ್ಲಿ 5.5% ಕ್ಕೆ ಏರಿದೆ” ಎಂದು MPC ಮಿನಟ್ಸಿನಲ್ಲಿ ತಿಳಿಸಿದ್ದಾರೆ.
ಪೆಟ್ರೋಲ್ ಬೆಲೆ ಶತಕದತ್ತ ದಾಪುಕಾಲಿಕ್ಕುತ್ತಿದ್ದು ಮುಂಬೈಯಲ್ಲಿ ಪೆಟ್ರೋಲ್ ಬೆಲೆ ರೂ. 97 ಕ್ಕೆ ತಲುಪಿದ್ದು ಡೀಸೆಲ್ ದರ ರೂ. 88 ರ ಗಡಿ ದಾಟಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 90.58 ಕ್ಕೆ ಏರಿದ್ದು ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ರೂ. 80.97 ಆಗಿದೆ. ಪೆಟ್ರೋಲ್ ಬೆಲೆ ಈಗಾಗಲೇ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಸ್ಥಳಗಳಲ್ಲಿ ರೂ. 100 ರ ಗಡಿ ದಾಟಿದೆ.