ಭೋಪಾಲ್ : ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ಕೆಲವು ದಿನಗಳಾಗಿವೆ ಮತ್ತು ಸುಮಾರು ಏಳು ನಗರಗಳಲ್ಲಿ ರೂ.100ರ ಗಡಿ ದಾಟಿದೆ. ಬೆಲೆ ಏರಿಕೆಯಿಂದಾಗಿ ಬಿಜೆಪಿಗೆ ದೇಶಾದ್ಯಂತ ಜನ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ, ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.
ಸಚಿವರ ಪ್ರಕಾರ, ಸೌರ ಮತ್ತು ಎಲೆಕ್ಟ್ರಿಕಲ್ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ತೈಲ ಬೆಲೆ ನಿಗದಿಯ ನಿಯಂತ್ರಣ ವ್ಯವಸ್ಥೆ ದುರ್ಬಲಗೊಳಿಸಿದ್ದಾರಂತೆ.
“ನಾನು ಪ್ರಧಾನಿ ಮೋದಿಯವರನ್ನು ಅಭಿನಂದಿಸುತ್ತಿದ್ದೇನೆ. ಸಾರಿಗೆಗೆ ಸೌರ ವಿದ್ಯುತ್ ಬಳಕೆಯನ್ನು ಉತ್ತೇಜಿಸುವ ಮೂಲಕ ಅವರು ಅಂತಾರಾಷ್ಟ್ರೀಯ ತೈಲಬೆಲೆಯ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿದ್ದಾರೆ. ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹೆಚ್ಚಿಸುವ ಮೋದಿ ನಿರ್ಧಾರ ತೈಲ ಬೆಲೆಯ ಮೇಲಿನ ನಮ್ಮ ನಿಯಂತ್ರಣವನ್ನು ಬಲಪಡಿಸಲಿದೆ” ಎಂದು ಸಚಿವ ಸಾರಂಗ್ ಹೇಳಿದ್ದಾರೆ.
“ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಪೂರೈಕೆ ತೈಲ ಬೆಲೆಯನ್ನು ನಿರ್ಧರಿಸುತ್ತದೆ. ಆದ್ದರಿಂದ ಬೇಡಿಕೆ ಕಡಿಮೆ ಮಾಡಿದಷ್ಟೂ ಬೆಲೆ ಮೇಲೆ ನಿಯಂತ್ರಣ ಸಾಧಿಸಿದಂತಾಗುತ್ತದೆ. ಈ ಕಾರಣದಿಂದಾಗಿ ಮೋದಿಯವರು ಎಲೆಕ್ಟ್ರಿಕಲ್ ವಾಹನಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ನಾವು ತೈಲ ಬೆಲೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿರುವುದರಿಂದ ಮತ್ತು ನಿರ್ವಹಣೆಯೂ ಕಷ್ಟವಾಗಿರುವುದರಿಂದ, ಭಾರತ ಸೇರಿದಂತೆ ಜಗತ್ತಿನ ಯಾವುದೇ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗಿಲ್ಲ. ಬಹುತೇಕ ಎಲ್ಲಾ ರಾಷ್ಟ್ರಗಳು ತೈಲ ಆಧಾರಿತ ವಾಹನಗಳನ್ನೇ ಅವಲಂಭಿಸಿವೆ. ಭಾರತವೂ ಅದಕ್ಕೆ ಹೊರತಾಗಿಲ್ಲ.