ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಇಂದು ಕೂಡ ಮೇಲ್ಮುಖವಾಗಿಯೇ ಮುಂದುವರಿದಿದೆ. ಮಧ್ಯಪ್ರದೇಶದ ಏಳು ನಗರಗಳಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100ರ ಗಡಿ ದಾಟಿದೆ. ರಾಜಸ್ಥಾನದಲ್ಲಿ ಎರಡು ನಗರಗಳಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ರೂ. 100ರ ಗಡಿ ದಾಟಿದೆ. ಪ್ರೀಮಿಯಂ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿ ಹಲವು ದಿನಗಳಾಗಿವೆ.
ಮಧ್ಯಪ್ರದೇಶದ ರೇವಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ದಾಖಲೆಯ ರೂ. 100.72ಕ್ಕೆ ಏರಿಕೆಯಾಗಿದೆ. ಅಲ್ಲಿನ ಶಾದೋಲ್ ನಲ್ಲಿ ರೂ. 100.60, ಅನುಪುರದಲ್ಲಿ ರೂ. 100.55, ಬಾಲಾಘಾಟ್ ನಲ್ಲಿ 100.31, ಚಿಂದ್ವಾರದಲ್ಲಿ ರೂ. 100.13, ಪನ್ನಾದಲ್ಲಿ ರೂ. 100.14, ಶಿವೊಪುರ್ ನಲ್ಲಿ ರೂ. 100.05 ಆಗಿದೆ. ಮಧ್ಯಪ್ರದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ 99 ರೂ. ದಾಟಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಇನ್ನು ಕೆಲವೇ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ರೂ. 100ರ ಗಡಿ ದಾಟಲಿದೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪೆಟ್ರೋಲ್ ಬೆಲೆ 98.28 ರೂ. ಆಗಿದೆ.
ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100.38 ಮತ್ತು ಹನುಮಗಢದಲ್ಲಿ 100.16 ರೂ. ಆಗಿದೆ. ಡೀಸೆಲ್ ಬೆಲೆಯೂ ಇದೇ ರೀತಿಯಲ್ಲಿ ಏರಿಕೆ ಗತಿಯಲ್ಲೇ ಸಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 93.21 ರೂ., ಡೀಸೆಲ್ ಬೆಲೆ 85.44 ರೂ., ಮುಂಬೈಯಲ್ಲಿ ಪೆಟ್ರೋಲ್ 96.62, ಡೀಸೆಲ್ 87.67 ರೂ., ಜೈಪುರದಲ್ಲಿ ಪೆಟ್ರೋಲ್ 96.69 ರೂ., ಡೀಸೆಲ್ 89.04 ರೂ., ಪಾಟ್ನಾದಲ್ಲಿ ಪೆಟ್ರೋಲ್ 92.52 ರೂ., ಡೀಸೆಲ್ 85.82 ರೂ. ಆಗಿದೆ.
ಇಷ್ಟಾದರೂ ಮುಖ್ಯವಾಹಿನಿ ಮಾಧ್ಯಮಗಳು ಪೆಟ್ರೋಲ್ ಬೆಲೆ ಏರಿಕೆಯ ಕಾರಣಗಳನ್ನು ನೀಡುತ್ತಾ, ಸಮರ್ಥಿಸಿಕೊಳ್ಳುತ್ತಾ ಪರೋಕ್ಷವಾಗಿ ಬಿಜೆಪಿ ಸರಕಾರದ ಪರವಾಗಿ ನಿಂತಿವೆ. ಬಿಜೆಪಿ ಆಡಳಿತದ ಏಳು ನಗರಗಳಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದ್ದರೂ, ರಾಜಸ್ಥಾನದಲ್ಲಿ ಗಂಗಾನಗರದಲ್ಲಿ ರೂ.100ರ ಗಡಿ ದಾಟಿರುವ ಬಗ್ಗೆ ವರದಿಗಳನ್ನು ಮಾಡುತ್ತಾ ಜನರನ್ನು ಕತ್ತಲಲ್ಲಿಡುವ ಮತ್ತು ಮಾಧ್ಯಮ ರಾಜಕಾರಣದಲ್ಲಿ ನಿರತವಾಗಿವೆ.