ಮಧ್ಯಪ್ರದೇಶ, ರಾಜಸ್ಥಾನದಲ್ಲಿ ರೂ.100ರ ಗಡಿ ದಾಟಿದ ಪೆಟ್ರೋಲ್ ದರ | ಬೆಲೆ ಏರಿಕೆಯಲ್ಲೂ ‘ಮಾಧ್ಯಮ ರಾಜಕಾರಣ’!

Prasthutha|

ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಇಂದು ಕೂಡ ಏರಿಕೆಯಾಗಿದ್ದು, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 100 ರೂ. ಗಡಿ ದಾಟಿದೆ. ಮಧ್ಯಪ್ರದೇಶದ ಅನುಪುರದಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100.23 ಆಗಿದೆ. ರಾಜಸ್ಥಾನದ ಗಂಗಾನಗರದಲ್ಲೂ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100.23 ಆಗಿದೆ. ಈ ನಗರಗಳಲ್ಲಿ ಪ್ರೀಮಿಯಂ ಪೆಟ್ರೋಲ್ ದರ 100 ರೂ. ಗಡಿ ಹಲವು ದಿನಗಳ ಹಿಂದೆಯೇ ದಾಟಿದೆ.

- Advertisement -

ಮಧ್ಯಪ್ರದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ 99 ರೂ. ದಾಟಿ, ಶತಕದತ್ತ ರಾಕೆಟ್ ವೇಗದಲ್ಲಿ ಸಾಗುತ್ತಿದೆ. ಬಹುತೇಕ ರಾಜ್ಯಗಳ ರಾಜಧಾನಿಗಳಲ್ಲಿ ಪೆಟ್ರೋಲ್ ಬೆಲೆ ಕೊಂಚ ಕಡಿಮೆಯಿರುತ್ತದೆ, ಆದರೆ ಇತರ ನಗರಗಳಲ್ಲಿ ಹೆಚ್ಚಿರುತ್ತದೆ. ಮುಖ್ಯವಾಹಿನಿ ಮಾಧ್ಯಮಗಳು ರಾಜ್ಯ ರಾಜಧಾನಿಗಳಲ್ಲಿನ ಬೆಲೆಗಳನ್ನು ಮಾತ್ರ ತೋರಿಸಿ, ಜನರನ್ನು ಇನ್ನೂ ಕತ್ತಲಲ್ಲಿಟ್ಟಿವೆ.

ಅದರಲ್ಲೂ, ಪೆಟ್ರೋಲ್ ಬೆಲೆ ರೂ. 100ರ ಗಡಿ ದಾಟಿರುವುದು ರಾಜಸ್ಥಾನದ ಗಂಗಾನಗರದ ವಿಷಯ ಎಲ್ಲಾ ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಚರ್ಚೆಯಾಗುತ್ತಿದೆ. ಅದಕ್ಕಿಂತಲೂ ಮೊದಲು ರೂ.100ರ ಗಡಿ ದಾಟಿರುವ ಮಧ್ಯಪ್ರದೇಶದ ಚರ್ಚೆಯೇ ಆಗುವುದಿಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತವಿರುವುದರಿಂದ ಅಲ್ಲಿನ ದರವನ್ನು ಎತ್ತಿ ತೋರಿಸುವ ಮಾಧ್ಯಮಗಳು, ಬಿಜೆಪಿ ಆಡಳಿತದ ಮಧ್ಯಪ್ರದೇಶದ ಬೆಲೆ ಏರಿಕೆಯ ಬಗ್ಗೆ ಮೌನವಾಗಿವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತ ಮಾಹಿತಿಗಳು ಆನ್ ಲೈನ್ ನಲ್ಲಿ ಲಭ್ಯವಿದ್ದರೂ, ರಾಜಸ್ಥಾನದ ಮಾಹಿತಿ ಈ ಮಾಧ್ಯಮಗಳಿಗೆ ಲಭ್ಯವಾಗುತ್ತವೆ, ಆದರೆ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಬೆಲೆಯಿರುವುದು ಕಾಣುತ್ತಿಲ್ಲ.

- Advertisement -

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ವಿಚಾರದಲ್ಲೂ ಮುಖ್ಯವಾಹಿನಿ ಮಾಧ್ಯಮಗಳು ಬಿಜೆಪಿ ಪರ ರಾಜಕೀಯ ಮಾಡುತ್ತಿರುವುದು ಈಗ ಯಾರಿಗೂ ಅರ್ಥವಾಗದ ವಿಚಾರವೇನಲ್ಲ. ಹಿಂದೆಲ್ಲಾ 50 ಪೈಸೆ, 1 ರೂ. ಏರಿಕೆಯಾದರೂ ಜನರ ಸಂಕಷ್ಟದ ಪರವಾಗಿ ಧ್ವನಿ ಎತ್ತುತ್ತಿರುವಂತೆ ಪೋಸು ನೀಡುತ್ತಿದ್ದ ಮಾಧ್ಯಮಗಳು, ಇಂದು ಪೆಟ್ರೋಲ್ ಬೆಲೆ ಏರಿಕೆಗೆ ಕಾರಣಗಳನ್ನು ವಿಶ್ಲೇಷಿಸಿ, ಜನರನ್ನು ಸಮಾಧಾನಿಸುವ ಕಾರ್ಯದಲ್ಲಿ ನಿರತವಾಗಿವೆ.

ಪೆಟ್ರೋಲ್ ಬೆಲೆ 100ರ ಗಡಿ ಸಮೀಪಿಸುತ್ತಿರುವ ನಡುವೆ, ಜನ ಸಾಮಾನ್ಯರ ಸಂಕಷ್ಟದ ಬಗ್ಗೆ ಚರ್ಚಿಸಬೇಕಾದ ಮಾಧ್ಯಮಗಳು ಪೆಟ್ರೋಲ್ ನ ಮೂಲಬೆಲೆ, ರಾಜ್ಯದ ತೆರಿಗೆ, ಕೇಂದ್ರದ ತೆರಿಗೆ ಲೆಕ್ಕಹಾಕುತ್ತಾ ಬೆಲೆ ಏರಿಕೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತವೆ. ಪೆಟ್ರೋಲ್ ಬೆಲೆ ಏರಿಕೆಗೆ ರಾಜ್ಯಗಳ ತೆರಿಗೆಯೇ ಹೊಣೆ ಎಂಬಂತೆ ಬಿಂಬಿಸುವ ಮಾಧ್ಯಮಗಳು, ಈ ವಿಚಾರದಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರಕಾರದ ಪರ ಒಂದು ಅನುಭೂತಿ ಹೊಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜಸ್ಥಾನದ ಬೆಲೆ ಏರಿಕೆ ತೋರಿಸಿ, ಅದಕ್ಕೂ ಕಾಂಗ್ರೆಸ್ ಅನ್ನು ಹೊಣೆಯಾಗಿಸುವ ಬುದ್ದಿ ಪ್ರದರ್ಶಿಸುತ್ತಿವೆ. ಈ ನಡುವೆ, ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಾಗಿರುವ ಬೆಲೆ ಏರಿಕೆಯ ಬಗ್ಗೆ ಮಾತನಾಡದೆ ಜಾಣಮೌನ ತಾಳುತ್ತವೆ.   



Join Whatsapp