ದೇಶದಲ್ಲಿ ಸತತ 9ನೇ ದಿನವಾದ ಬುಧವಾರ ಕೂಡ ತೈಲ ಬೆಲೆಯಲ್ಲಿ ಏರಿಕೆ ಕಂಡಿದ್ದು, ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದೆ.
ಮಧ್ಯಪ್ರದೇಶದ ಬಾಲಘಾಟ್, ಅನುಪುರ್ ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಶತಕದ ಗಡಿ ದಾಟಿದ್ದು, ಇನ್ನುಳಿದ ನಗರಗಳಲ್ಲಿ ಶತಕದ ಅಂಚಿನಲ್ಲಿದೆ. ರಾಜಸ್ತಾನದ ಗಂಗಾನಗರದಲ್ಲಿಯೂ ಇದೇ ಪರಿಸ್ಥಿತಿ ಇದೆ.
ತೈಲ ಕಂಪನಿಗಳು ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 25 ಪೈಸೆ ಹೆಚ್ಚಿಸಿದೆ. ಕಳೆದ 9 ದಿನಗಳಿಂದಲೂ ದರ ಏರುತ್ತಲೇ ಇದೆ.
ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 89.54 ರೂ., ಮುಂಬೈಯಲ್ಲಿ 96 ರೂ. ತಲುಪಿದೆ. ಉಳಿದಂತೆ ಕೊಲ್ಕತ್ತಾ, ಚೆನ್ನೈ, ಬೆಂಗಳೂರು, ಭುವನೇಶ್ವರ್, ಹೈದರಾಬಾದ್, ಜೈಪುರ, ಪಾಟ್ನಾ, ತಿರುವನಂತಪುರ ನಗರಗಳಲ್ಲಿ ಪೆಟ್ರೋಲ್ 90ರ ಗಡಿ ದಾಟಿದೆ.
ಡೀಸೆಲ್ ಬೆಲೆಯಲ್ಲಿಯೂ ಏರಿಕೆ ಕಂಡಿದ್ದು, ನವದೆಹಲಿಯಲ್ಲಿ ಲೀಟರ್ ಡೀಸೆಲ್ ಗೆ 79.95 ರೂ. ತಲುಪಿದ್ದು, ಇನ್ನುಳಿದ ನಗರಗಳಲ್ಲಿ ಡೀಸೆಲ್ ದರ 80ರ ಗಡಿ ದಾಟಿದೆ.
ದೇಶದ ಇತಿಹಾಸದಲ್ಲೇ ತೈಲ ಬೆಲೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಇದೇ ಮೊದಲು. ತೈಲ ಬೆಲೆ ಹೆಚ್ಚಳದಿಂದ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಕೂಡ ನಿರಂತರ ಏರಿಕೆಯಾಗುತ್ತಿದೆ. ಈ ವಾರದ ಆದಿಯಲ್ಲಿ ಪೆಟ್ರೋಲ್ ಬೆಲೆ 30 ಪೈಸೆ, ಡೀಸೆಲ್ ಬೆಲೆ 35 ಪೈಸೆ ಏರಿಕೆ ಕಂಡಿತ್ತು.