ನವದೆಹಲಿ: ನೂತನ ಸಂಸತ್ ಕಟ್ಟಡವನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ನೂತನ ಸಂತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುವು ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಭಾರೀ ವಿವಾದವೇ ಏರ್ಪಟ್ಟಿದೆ. ಕಾಂಗ್ರೆಸ್, ಟಿಎಂಸಿ, ಆಪ್, ಜೆಡಿಯು ಸೇರಿದಂತೆ 20 ವಿರೋಧ ಪಕ್ಷಗಳು ಬಹಿಷ್ಕಾರ ಹಾಕಿದ ಬೆನ್ನಲ್ಲೇ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ರಾಷ್ಟ್ರಪತಿ ಅವರಿಂದ ಉದ್ಘಾಟನೆ ಮಾಡದೇ ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ ಎಂದು ವಕೀಲ ಸಿಆರ್ ಜಯ ಸುಕಿನ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಯಾವುದೇ ಸದನವನ್ನು ಕರೆಯುವ ಮತ್ತು ಮುಂದೂಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಸಂಸತ್ತು ಅಥವಾ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುವುದರಿಂದ ಅವರಿಂದಲೇ ಲೋಕಾರ್ಪಣೆ ಮಾಡಬೇಕೆಂದು ಮನವಿ ಮಾಡಲಾಗಿದೆ.