ಬೆಂಗಳೂರು: ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆಯ ಗುತ್ತಿಗೆ ಪ್ರಕ್ರಿಯೆಯನ್ನು ಬಿಡಿಎ ರದ್ದು ಪಡಿಸಿರುವುದರ ಹಿಂದೆ, ತನಗೆ ಬೇಕಾದವರಿಗೆ ಗುತ್ತಿಗೆ ನೀಡುವ ಹಾಗೂ ಭಾರೀ ಪ್ರಮಾಣದ ಅಕ್ರಮ ಎಸಗುವ ದುರುದ್ದೇಶವಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, “ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆಯನ್ನು ಸಂಪರ್ಕಿಸುವ 74 ಕಿಲೋಮೀಟರ್ ಉದ್ದದ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವು ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಅಗತ್ಯವಾಗಿದೆ. ಇದಕ್ಕೆ ಒಟ್ಟು 2,560 ಎಕರೆ ಜಮೀನನ್ನು ಸರ್ಕಾರವು ಭೂಸ್ವಾಧೀನ ಮಾಡಬೇಕಿದೆ. ಆದರೆ 15 ವರ್ಷಗಳ ಹಿಂದೆ 1,180 ಎಕರೆ ಜಮೀನನ್ನು ನೋಟಿಫೈ ಮಾಡಿದ್ದು ಬಿಟ್ಟರೆ, ಉಳಿದ ಜಮೀನಿನ ನೋಟಿಫೈ ಈವರೆಗೂ ಸಾಧ್ಯವಾಗಿಲ್ಲ. ಕಳೆದ ಹದಿನೈದು ವರ್ಷಗಳಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ರಸ್ತೆ ನಿರ್ಮಾಣವನ್ನು ದಂಧೆಯನ್ನಾಗಿ ಮಾಡಿಕೊಂಡಿವೆ. ಪರಿಣಾಮವಾಗಿ, ಎಂದೋ ಪೂರ್ಣಗೊಳ್ಳಬೇಕಿದ್ದ ಯೋಜನೆಯು ಇನ್ನೂ ಆರಂಭವಾಗಿಲ್ಲ. ಈಗ ಗುತ್ತಿಗೆಯನ್ನು ರದ್ದು ಪಡಿಸಿರುವುದರ ಹಿಂದೆಯೂ ಅಕ್ರಮ ಎಸಗುವ ದುರುದ್ದೇಶವಿದೆ” ಎಂದು ಹೇಳಿದರು.
“ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳುವ ಜಮೀನಿನ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ನಿಯಮಾವಳಿ ರೂಪಿಸಬೇಕೆಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಬಿಡಿಎ ಪತ್ರ ಬರೆದಿದ್ದರೂ. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಪರಿಹಾರ ನೀಡಬೇಕಿದೆ. ಆದರೆ ರಾಜ್ಯ ಸರ್ಕಾರವು ಮಾರುಕಟ್ಟೆ ಬೆಲೆ ನೀಡಲೂ ಮೀನಮೀಷ ಎಣಿಸುತ್ತಿದೆ. ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯುವ ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟು ಕಮಿಷನ್ ಪಡೆಯುವುದೊಂದೇ ಸರ್ಕಾರದ ಗುರಿಯಾಗಿದ್ದು, ಜಮೀನು ನೀಡುವ ರೈತರ ಹಿತ ಮುಖ್ಯವಾಗಿಲ್ಲ. ರೈತರಿಗೆ ಶೀಘ್ರವೇ ಉತ್ತಮ ಪರಿಹಾರದ ಮೊತ್ತ ಪಾವತಿಸಬೇಕು. ಇಲ್ಲದಿದ್ದರೆ ಆಮ್ ಆದ್ಮಿ ಪಾರ್ಟಿಯು ಸಂತ್ರಸ್ತ ರೈತರ ಪರವಾಗಿ ನಿಲ್ಲಲಿದೆ” ಎಂದು ಮೋಹನ್ ದಾಸರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮಹಿಳಾ ನಾಯಕಿ ಸುಮನ್ ಪ್ರಶಾಂತ್ ಭಾಗವಹಿಸಿದ್ದರು