‘ಭ್ರಷ್ಟಾಚಾರದ ಸುಗಂಧ ದ್ರವ್ಯ’: ಸಮಾಜವಾದಿ ಪಕ್ಷದ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ

Prasthutha|

ಕಾನ್ಪುರ: ಸುಗಂಧ ದ್ರವ್ಯಗಳ ಉದ್ಯಮಿ ಪಿಯೂಷ್‌ ಜೈನ್‌ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ಉತ್ತರಪ್ರದೇಶದಲ್ಲಿ ತೀವ್ರ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಮಂಗಳವಾರ ಕಾನ್ಪುರದಲ್ಲಿ ಮೆಟ್ರೋ ರೈಲು ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನೋಟು ತುಂಬಿದ ಪೆಟ್ಟಿಗೆಗಳು ಹೊರಬಂದಿವೆ. ಅವರು (ಸಮಾಜವಾದಿ ಪಕ್ಷ) ಇದನ್ನು ನಾವೇ ಮಾಡಿದ್ದೇವೆ ಎಂದು ಹೇಳುತ್ತಾರೆ ಎಂದು ನಾನು ಭಾವಿಸಿದೆ. ಕಾನ್ಪುರದ ಜನರು ವ್ಯಾಪಾರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. 2017ರ ಮೊದಲು ಅವರು ಉತ್ತರಪ್ರದೇಶದಾದ್ಯಂತ ಚಿಮುಕಿಸಿದ್ದ ‘ಭ್ರಷ್ಟಾಚಾರದ ಸುಗಂಧ ದ್ರವ್ಯ’ ಈಗ ರಾಜ್ಯದ ಜನತೆಗೆ ನೋಡಲು ಸಿಗುತ್ತಿದೆ. ಇದುವೇ ಅವರ ಸಾಧನೆ ಮತ್ತು ಸತ್ಯ’ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

- Advertisement -

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು, ತಾವು 5 ವರ್ಷಗಳ ಕಾಲ ರಾಜ್ಯವನ್ನು ಲೂಟಿ ಮಾಡಲು ಲಾಟರಿ ಗೆದ್ದಿದ್ದೇವೆ ಎಂದು ಭಾವಿಸುತ್ತಿದ್ದವು. ಆದರೆ, ಈಗಿರುವ ‘ಡಬಲ್‌ ಎಂಜಿನ್‌ ಸರ್ಕಾರ’ ಮಾತ್ರ ಪ್ರಾಮಾಣಿಕವಾಗಿ ಅಧಿಕಾರ ನಡೆಸುತ್ತಿದೆ ಎಂದೂ ಮೋದಿ ಹೇಳಿದ್ದಾರೆ.

ಪಿಯೂಷ್‌-ಪುಷ್ಪರಾಜ್‌ ಮಿಕ್ಸ್‌ಅಪ್‌:
ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌, “ಉದ್ಯಮಿ ಪಿಯೂಷ್‌ ಜೈನ್‌ ಮತ್ತು ನಮ್ಮ ಪಕ್ಷದ ಪುಷ್ಪರಾಜ್‌ ಜೈನ್‌ ನಡುವೆ ಬಿಜೆಪಿ ಗೊಂದಲ ಮಾಡಿಕೊಂಡಿದೆ. ಪುಷ್ಪರಾಜ್‌ ಬದಲಿಗೆ ಪಿಯೂಷ್‌ ಮನೆಗೆ ಐಟಿ ದಾಳಿಯಾಗುವಂತೆ ಮಾಡಿದೆ. ಈ ಮೂಲಕ ತಮ್ಮದೇ ಉದ್ಯಮಿಯನ್ನು ಬಿಜೆಪಿ ರೈಡ್‌ ಮಾಡಿಸಿದೆ’ ಎಂದು ಹೇಳುವ ಮೂಲಕ ಜೈನ್‌ಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



Join Whatsapp