ಜನ ಪರ್ಯಾಯ ಬಜೆಟ್ ಅಧಿವೇಶನ ಸಮಾರೋಪ: ಹಲವು ನಿರ್ಣಯಗಳು ಅಂಗೀಕಾರ

Prasthutha|

ಬೆಂಗಳೂರು: ಕಳೆದ ಮೂರು ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಜನ ಪರ್ಯಾಯ ಬಜೆಟ್ ಅಧಿವೇಶನದಲ್ಲಿ ಬೃಹತ್ ಪ್ರಮಾಣದಲ್ಲಿ ಸೇರಿದ್ಧ ಜನಸ್ತೋಮದ ಸರ್ವಾನುಮತದಿಂದ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

- Advertisement -


ಸಂಯುಕ್ತ ಹೋರಾಟ – ಕರ್ನಾಟಕ ವತಿಯಿಂದ ಮಾರ್ಚ್ 21-23ರವರೆಗೆ ಹಮ್ಮಿಕೊಂಡಿದ್ದ ಜನ ಪರ್ಯಾಯ ಬಜೆಟ್ ಅಧಿವೇಶನದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಣಕಹಳೆಯನ್ನು ಮೊಳಗಿಸಿದರು.
ರಾಜ್ಯದ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಹಾಗೂ ಬಜೆಟ್ ಪ್ರಸ್ತಾಪದಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ಕೋವಿಡ್ ಬಿಕ್ಕಟ್ಟಿನ ಜೊತೆ ಬೆಲೆ ಏರಿಕೆ, ನಿರುದ್ಯೋಗ, ಬಡತನ, ವಲಸೆ, ಆತ್ಮಹತ್ಯೆ ಮುಂತಾದ ಹಲವಾರು ಜ್ವಲಂತ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿರುವ ರಾಜ್ಯದ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ದಲಿತರು, ಮಹಿಳೆಯರು ಹಾಗೂ ವಿದ್ಯಾರ್ಥಿ-ಯುವಜನರಿಗೆ ಯಾವುದೇ ಪರಿಹಾರ ಕ್ರಮಗಳನ್ನು ಒದಗಿಸಿಲ್ಲ ಬದಲಿಗೆ ಮತ್ತಷ್ಟು ಹೊರೆಗಳನ್ನು ಹೇರಲಾಗಿದೆ ಎಂದು ಆರೋಪಿಸಲಾಗಿದೆ.

- Advertisement -


ರಾಜ್ಯದ ದಲಿತರು ಹಾಗೂ ಮಹಿಳೆಯರು ವಿಶೇಷವಾಗಿ ಹೆಚ್ಚುಹೆಚ್ಚು ದೌರ್ಜನ್ಯಕ್ಕೆ ತುತ್ತಾಗುತ್ತಾ ಸಾಮಾಜಿಕ ದಮನ ಹಾಗೂ ಅಪಮಾನಗಳನ್ನು ಅನುಭವಿಸುತ್ತಾ ಇದ್ದರೂ ಬಜೆಟ್‌ನಲ್ಲಿ ಸೂಕ್ತ ಪರಿಹಾರ ಕ್ರಮಗಳನ್ನು ಒದಗಿಸದೇ ಭಾರಿ ದೊಡ್ಡ ಸಾಮಾಜಿಕ ಅನ್ಯಾಯಕ್ಕೆ ಗುರಿಪಡಿಸಲಾಗಿದೆ.


ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೆಸರಾಗಿರುವ ಕರ್ನಾಟಕದ ಸೌಹಾರ್ದ-ಶಾಂತಿ ಪರಂಪರೆಗೆ, ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಸಮಾಜದಲ್ಲಿ ಕೋಮು ವಿಭಜನೆಯ ದಾಳವಾಗಿ ಸ್ವತಃ ರಾಜ್ಯ ಸರ್ಕಾರವೇ ಕೆಲಸ ಮಾಡುತ್ತಿದೆ. ಇದು ಅತ್ಯಂತ ಕಳವಳಕಾರಿಯಾದ ವಿದ್ಯಮಾನವಾಗಿದ್ದು ಈ ವಿದ್ಯಮಾನಗಳು ಈಗಾಗಲೇ ಹಲವು ರೀತಿಯ ತಾರತಮ್ಯಗಳಿಗೆ ಗುರಿಯಾಗಿರುವ ಅಲ್ಪಸಂಖ್ಯಾತ ಸಾಮಾಜಿಕ ಜನಸಮೂಹಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರ ಸರಿಸುವ ಕೋಮು ಶಕ್ತಿಗಳ ಹೀನ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿವೆ.


ಈ ಹಿನ್ನೆಲೆಯ ಸತತ ಮೂರು ದಿನಗಳು ನಡೆದ “ಜನ ಪರ್ಯಾಯ ಬಜೆಟ್ ಅಧಿವೇಶನ”ವು ರಾಜ್ಯದ ಎಲ್ಲಾ ಪ್ರಮುಖ ವಿಷಯಗಳನ್ನು ಅಮೂಲಾಗ್ರವಾಗಿ ಚರ್ಚಿಸಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದ್ದು ಈ ನಿರ್ಣಯಗಳನ್ನು ಅನುಷ್ಠಾನಕ್ಕೆ ಬರಲು ಬಲಿಷ್ಠವಾದ ಜನ ಚಳುವಳಿಗೆ ಸಿದ್ಧರಾಗಲು ರಾಜ್ಯದ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿ-ಯುವಜನ ಸಮೂಹಕ್ಕೆ ಈ ಮೂಲಕ ಕರೆ ನೀಡಿದೆ.




Join Whatsapp