►ಪರಿಹಾರಕ್ಕಾಗಿ ಕುಟುಂಬಸ್ಥರ ಆಗ್ರಹ
ಮಂಗಳೂರು: ಬಜರಂಗದಳ ಕಾರ್ಯಕರ್ತರಿಂದ ತೀವ್ರ ಹಲ್ಲೆಗೊಳಗಾಗಿದ್ದ ಬೆಳ್ಳಾರೆಯ ಕಳಂಜ ನಿವಾಸಿ ಮುಹಮ್ಮದ್ ಮಸೂದ್ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದು, ಮೃತದೇಹ ತೆಗೆಯಬೇಕಾದರೆ ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಹಾರ ನೀಡಬೇಕು ಎಂದು ಕುಟುಂಬಸ್ಥರ ಅಗ್ರಹಿಸಿದ್ದಾರೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮಸೂದ್ ಮೃತಪಟ್ಟಿದ್ದು, ಆಸ್ಪತ್ರೆಯ ಬಳಿ ಜನರು ಜಮಾಯಿಸಿದ್ದಾರೆ. ಅಲ್ಲದೆ ಮೃತದೇಹ ತೆಗೆಯಬೇಕಾದರೆ ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು ಅಗ್ರಹಿಸಿದ್ದಾರೆ.
ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಪ್ರಕರಣ ಸಂಬಂಧ 8 ಮಂದಿ ಬಜರಂಗದಳದ ಕಾರ್ಯಕರ್ತರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಬಜರಂಗ ದಳದ ಕಾರ್ಯಕರ್ತರಾದ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ್ ಬಂಧಿತರಾಗಿದ್ದಾರೆ.