ಕೋಲ್ಕತ್ತಾ: ರಾಜಕೀಯ ಲಾಭಕ್ಕಾಗಿ ದೇಶದ ಜನರ ನಡುವೆ ಕಂದಕ ಸೃಷ್ಟಿಸಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ, ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತ ಸ್ವಾತಂತ್ರ್ಯಗೊಂಡು ದಶಕಗಳೇ ಮೀರಿದರೂ ರಾಜಕೀಯಕ್ಕಾಗಿ ಜನರನ್ನು ಜೈಲಿಗಟ್ಟುವ ವಸಾಹತುಶಾಹಿ ಪ್ರಯತ್ನ ಮುಂದುವರಿದಿದೆ ಎಂದು ಅವರು ವಿಷಾದಿಸಿದರು.
ಆನಂದ್ ಬಝಾರ್ ಪತ್ರಿಕೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ಸಹಬಾಳ್ವೆ ಜೀವನದಲ್ಲಿ ಒಡಕು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ನನ್ನ ಎಳೆಯ ವಯಸ್ಸಿನಲ್ಲಿ ರಾಜಕೀಯ ಕಾರಣಕ್ಕಾಗಿ ಹಲವರನ್ನು ಜೈಲಿಗಟ್ಟಲಾಗುತ್ತಿದ್ದು, ಯಾವುದೇ ಅಪರಾಧ ಮಾಡದೆ ಜನರನ್ನು ಕಾರಾಗೃಹಕ್ಕೆ ತಳ್ಳುವ ಸಂಪ್ರದಾಯ ಎಂದಾದರೂ ನಿಲ್ಲಲಿದೆಯೇ ಎಂದು ಅವರು ಪ್ರಶ್ನಿಸಿದರು.