ಈಡೇರದ ಬೇಡಿಕೆ: ಸಚಿವ ಅಂಗಾರ ಜೊತೆ ಗ್ರಾಮಸ್ಥರ ವಾಗ್ವಾದ; ಮತದಾನ ಬಹಿಷ್ಕಾರದ ಎಚ್ಚರಿಕೆ

Prasthutha|

ಕಡಬ (ಉಪ್ಪಿನಂಗಡಿ): ತಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಬಲ್ಯ ಗ್ರಾಮದ ದೇವತ್ತಡ್ಕ ಗ್ರಾಮಸ್ಥರು ಗುದ್ದಲಿ ಪೂಜೆ ನೆರವೇರಿಸಲು ಗ್ರಾಮಕ್ಕೆ ಬಂದ ಸಚಿವ ಅಂಗಾರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

- Advertisement -

‘ರಸ್ತೆ ದುರಸ್ತಿ ಮಾಡಿಕೊಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಆದರೆ ಇದಕ್ಕೆ ಯಾವ ಸ್ಪಂದನೆಯೂ ಇಲ್ಲ. ಚುನಾವಣೆ ಹತ್ತಿರ ಬರುವಾಗ ಗುದ್ದಲಿ ಪೂಜೆ ನೆಪದಲ್ಲಿ ಗ್ರಾಮಕ್ಕೆ ಬಂದಿದ್ದೀರಿ, ರಸ್ತೆ ಕಾಮಗಾರಿ ನಡೆಯುವ ಬಗ್ಗೆ ನಮಗೆ ನಂಬಿಕೆ ಇಲ್ಲ’ ಎಂದು ಗ್ರಾಮಸ್ಥರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ಜೊತೆ ಬಿಜೆಪಿ ಮುಖಂಡರ ಜೊತೆ ವಾಗ್ವಾದಕ್ಕಿಳಿದ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಸಚಿವರು ಸೋಮವಾರ ಬಲ್ಯ ಗ್ರಾಮದ ಗುತ್ತು-ಕಲ್ಲೇರಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ ಮಾಡಲು ಬಂದಿದ್ದರು. ಈ ವೇಳೆ ಸಚಿವರ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

- Advertisement -

ಗ್ರಾಮಸ್ಥರು ಈ ಹಿಂದಿನ ಕಾಮಗಾರಿಗಳ ವಿಳಂಬದ ಬಗ್ಗೆ ಗುದ್ದಲಿ ಪೂಜೆ ವೇಳೆ ಸಚಿವರನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದಾಗಿ ಸಚಿವರಿಗೆ ಮತ್ತು ಗ್ರಾಮಸ್ಥರಿಗೆ ಪರಸ್ಪರ ವಾಗ್ವಾದ ಉಂಟಾಗಿದೆ. “ಸರಕಾರ ಹಣ ಕೊಡುತ್ತಿಲ್ಲ. ನೀವು ಮನವಿ ಕೊಡಿ, ಬಿಡಿ. ನಾನು ಮಾಡುವ ಕೆಲಸ ಮಾಡ್ತೇನೆ. ನೀವು ಮನವಿ ಕೊಟ್ಟು 4 ವರ್ಷವಾಗಿದೆ ಅಂತ ಒಪ್ಪಿಕೊಳ್ಳುತ್ತೇನೆ. ಆದರೆ, ಕೋವಿಡ್ ಬಂದು ಸಮಸ್ಯೆಯಾಯ್ತು” ಎಂದು ಸಚಿವ ಎಸ್​. ಅಂಗಾರ ಹೇಳಿದ್ದಾರೆ. ಸಚಿವರ ಈ ರೀತಿಯ ಹೇಳಿಕೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಚರ್ಚೆಗಳ ನಡುವೆ ಬಿಜೆಪಿ ಮುಖಂಡರೊಬ್ಬರು “ನೀವು ಬಿಜೆಪಿಗೆ ಓಟು ನೀಡಿದ್ದೀರಿ ಎಂಬುದಕ್ಕೆ ಏನು ಗ್ಯಾರಂಟಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಗ್ರಾಮಸ್ಥರೊಬ್ಬರು “ನಾನೇ 38 ವೋಟುಗಳನ್ನು ಸಚಿವ ಅಂಗಾರ ಅವರಿಗೆ ನೀಡಿದ್ದೇನೆ. ಅವರನ್ನು ಕೇಳುವ ಹಕ್ಕು ನಮಗೆ ಇದೆ” ಎಂದು ಹೇಳಿದರು.

‘ಗ್ರಾಮದ ದಾರಿದೀಪವನ್ನು ಪಂಚಾಯತ್ ದುರಸ್ತಿ ನೆಪದಲ್ಲಿ ಕಳಚಿ ಆರು ತಿಂಗಳು ಕಳೆದಿದೆ. ಅದನ್ನು ಇನ್ನೂ ಸರಿಪಡಿಸಿಲ್ಲ. ಹಲವು ವರ್ಷಗಳಿಂದ ನಾವು ಬಿಜೆಪಿಗೇ ಮತ ನೀಡುತ್ತಿದ್ದೇವೆ. ಮುಂದೆ ನೀವು ವೋಟು ಕೇಳಲು ಗ್ರಾಮಕ್ಕೆ ಬನ್ನಿ. ಆಗ ನೋಡಿಕೊಳ್ಳುತ್ತೇವೆ’ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿ ಗ್ರಾಮಸ್ಥರು ಅಲ್ಲಿಂದ ತೆರಳಿದರು.

ಮತದಾನ ಬಹಿಷ್ಕಾರ ಬ್ಯಾನರ್​:

ಬಲ್ಯ ಗ್ರಾಮದಲ್ಲಿ ಈಗಾಗಲೇ ಹಲವು ಕಾಮಗಾರಿಗಳ ಗುದ್ದಲಿ ಪೂಜೆ ನಡೆದರೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂಬ ಆರೋಪವಿದೆ. ಇಲ್ಲಿನ ರಸ್ತೆಯೊಂದರ ಕಾಮಗಾರಿ ಆರಂಭಿಸುವಂತೆ ಖುದ್ದು ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಆದೇಶ ಮಾಡಿ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿತ್ತು. ಆದರೂ ವಿವಿಧ ನೆಪವೊಡ್ಡಿ ಕಾಮಗಾರಿಗಳು ಆರಂಭವಾಗಿಲ್ಲ ಎನ್ನಲಾಗಿದೆ. ಇಂತಹ ಹಲವು ಘಟನೆಗಳಿಂದ ಕೋಪಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್​ಗಳನ್ನು ಗ್ರಾಮದ ಕೆಲವು ಕಡೆಗಳಲ್ಲಿ ಅಳವಡಿಸಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಗ್ರಾಮಸ್ಥರೊಬ್ಬರು “ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಕಳೆದ ಚುನಾವಣೆ ವೇಳೆಯೂ ಬೇಡಿಕೆ ಮುಂದಿಟ್ಟಿದ್ದೆವು. ರಸ್ತೆ ಆಗುವ ತನಕ ಮತದಾನ ಬಹಿಷ್ಕರಿಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

Join Whatsapp