ಮದ್ಯಕ್ಕಾಗಿ ಸರಕಾರಿ ಪೀಠೋಪಕರಣ ಮಾರಿದ ಗುಮಾಸ್ತ: ಕಿಟಕಿ ಬಾಗಿಲನ್ನೂ ಬಿಡದ ಭೂಪ

Prasthutha|

ಬೆರ್ಹಾಂಪುರ್: ಮದ್ಯ ಸೇವಿಸಲು ಬೇಕಾಗಿ ಮುಚ್ಚಲ್ಪಟ್ಟ ರಾಜ್ಯ ಸರ್ಕಾರಿ ಕಚೇರಿಯ ಗುಮಾಸ್ತನೊಬ್ಬ ಬಾಗಿಲು, ಕಿಟಕಿಗಳು ಸೇರಿದಂತೆ ಸರ್ಕಾರಿ ಕಚೇರಿಯ ಪೀಠೋಪಕರಣ ಸೇರಿ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಿದ ವಿಲಕ್ಷಣ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ಬೆರ್ಹಾಂಪುರ್ ನಗರದಲ್ಲಿ ನಡೆದಿದೆ.

- Advertisement -

1948ರಲ್ಲಿ ಸ್ಥಾಪನೆಯಾದಾಗಿದ್ದ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯನ್ನು 2 ವರ್ಷಗಳ ಹಿಂದೆ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಕಚೇರಿಯ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ ನಂತರ, ಹಳೆಯ ಕಚೇರಿಯನ್ನು ಮುಚ್ಚಲಾಗಿತ್ತು. ಅಲ್ಲಿ ಗುಮಾಸ್ತನಾಗಿದ್ದ ಎಂ ಪಿತಾಂಬರ್ ಎಂಬಾತನನ್ನು ಭದ್ರತಾ ಸಿಬ್ಬಂದಿಯಾಗಿಯೂ ನೇಮಿಸಲಾಗಿತ್ತು.

- Advertisement -

ಹಳೆಯ ಕಚೇರಿ ಮುಚ್ಚಲ್ಪಟ್ಟ ಕಾರಣ ಅಧಿಕಾರಿಗಳಾಗಲೀ, ಸಂದರ್ಶಕರಾಗಲೀ ಅಲ್ಲಿಗೆ ಹೋಗುತ್ತಿರಲಿಲ್ಲ. ಎರಡು ದಿನಗಳ ಹಿಂದೆ, ಶಿಕ್ಷಣ ಇಲಾಖೆಯ ಸೆಕ್ಷನ್ ಆಫೀಸರ್ ಜಯಂತ್ ಕುಮಾರ್ ಸಾಹು ಅವರು ಕೆಲವು ಹಳೆಯ ಕಡತಗಳನ್ನು ಪರಿಶೀಲಿಸಲು ಕಚೇರಿಗೆ ಹೋದಾಗ, ಅದು ಸಂಪೂರ್ಣವಾಗಿ ಖಾಲಿ ಇರುವುದು ಕಂಡುಬಂದಿದ್ದು, ಎಲ್ಲಾ ಕಡತಗಳು ಮತ್ತು ಪೀಠೋಪಕರಣಗಳು ಕಾಣೆಯಾಗಿದ್ದವು. ಅವರು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಮತ್ತು ಬೆರ್ಹಾಂಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಕಚೇರಿಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ ಏಕೈಕ ವ್ಯಕ್ತಿ ಪಿತಾಂಬರ್ ಆಗಿದ್ದರಿಂದ, ಪೊಲೀಸರು ಆತನನ್ನು ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಮದ್ಯ ಖರೀದಿಸಲು ಬೇಕಾಗಿ ಎಲ್ಲಾ ಕಡತಗಳು, ಪೀಠೋಪಕರಣಗಳನ್ನು ಮಾರಾಟ ಮಾಡಿದ್ದಾಗಿ ಪಿತಾಂಬರ್ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ 35 ಅಲ್ಮೆರಾಗಳು, 10 ಸೆಟ್ ಕುರ್ಚಿಗಳು ಮತ್ತು ಮೇಜುಗಳನ್ನು ಗುಜರಿ ವ್ಯಾಪಾರಿಗಳಿಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಗುಜರಿ ವ್ಯಾಪಾರಿಗಳನ್ನು ಬಂಧಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಬಿನಿತಾ ಸೇನಾಪತಿ ಅವರನ್ನು ಸಂಪರ್ಕಿಸಿದಾಗ, ಇಲಾಖೆಯು ಪಿತಾಂಬರ್ ಆತನನ್ನು ಸೇವೆಯಿಂದ ಅಮಾನತುಗೊಳಿಸಿದೆ ಮತ್ತು ಈ ಬಗ್ಗೆ ಇಲಾಖಾ ತನಿಖೆ ನಡೆಸಲಾಗುವುದು ಎಂದು ಹೇಳಿದರು.

Join Whatsapp