ಕೋವಿಡ್ ಸೋಂಕಿತರಿಗೆ ನೆರವಾಗಲು ತನ್ನ ಪಿಂಚಣಿ ಹಣ ದಾನ ಮಾಡಿದ 70 ವರ್ಷದ ಶಾರದಮ್ಮ !

Prasthutha|

ವೃದ್ಧೆಯ ಉದಾರತೆಯ ಗುಣಕ್ಕೆ ವ್ಯಾಪಕ ಮೆಚ್ಚುಗೆ

- Advertisement -

ಮೈಸೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಮಧ್ಯಮ ವರ್ಗದ ಜನರು ದಾನ ಮಾಡುವುದಿರಲಿ ಸ್ವಂತದ ಖರ್ಚಿಗೂ ಪರದಾಡುವಂತಾಗಿದೆ. ಆದರೆ ಮೈಸೂರಿನ ಕೆ ಆರ್ ಪೆಟೇಯ 70 ವರ್ಷದ ಶಾರದಮ್ಮ ಎಂಬ ವೃದ್ಧೆ ಕೋವಿಡ್ ಸೋಂಕಿತರಿಗೆ ನೆರವಾಗಲು ತನ್ನ ಪಿಂಚಣಿ ಹಣವನ್ನೇ ದಾನವಾಗಿ ಸರಕಾರಕ್ಕೆ ನೀಡಿದ್ದಾರೆ. ಶಾರದಮ್ಮ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.  ಶಾರದಮ್ಮ ಅವರು ನಗರದ ಕೋವಿಡ್ ಕೇರ್ ಸೆಂಟರ್ ಗೆ ತನ್ನ ಪಿಂಚಣಿ ಹಣದಲ್ಲಿ ಕೂಡಿಟ್ಟ 10,000 ರೂಪಾಯಿಗಳನ್ನು ಕೆ ಆರ್ ಪೇಟೆಯ ತಹಶೀಲ್ದಾರ್ ಶಿವಮೂರ್ತಿಯವರ ಮೂಲಕ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ಹಣದಲ್ಲಿ ಸೋಂಕಿತರಿಗೆ ಕೇಂದ್ರದಲ್ಲಿ ಬಿಸ್ಕತ್ ಮತ್ತಿತರ ತಿನಿಸುಗಳನ್ನು ನೀಡುವಂತೆ ತಹಶೀಲ್ದಾರ್ ಅವರಲ್ಲಿ ವಿನಂತಿಸಿದ್ದಾರೆ. ವೃದ್ಧೆಯೊಬ್ಬರ ಈ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಕೋವಿಡ್ ಸೋಂಕಿತರಿಗೆ ಶಾರದಮ್ಮ ಅವರ ಮನಸ್ಸು ಮಿಡಿದಿರುವುದು ಇದು ಮೊದಲ ಬಾರಿಯೇನಲ್ಲ. ಮೊದಲ ಅಲೆಯ ವೇಳೆಯಲ್ಲೂ ಇವರು 10,000 ರೂಪಾಯಿಗಳನ್ನು ದಾನವಾಗಿ ನೀಡಿದ್ದರು. ಮಾತ್ರವಲ್ಲ ಶೆಟ್ಟಿ ನಾಯಕನ ಹಳ್ಳಿಯಲ್ಲಿನ ಕೋವಿಡ್ ಕೇರ್ ಸೆಂಟರ್ ಗೆ ತೆರಳಿ 200 ರೋಗಿಗಳಿಗೆ ಸ್ನ್ಯಾಕ್ಸ್, ಜ್ಯೂಸ್ ಬಾಟಲ್ ಗಳನ್ನು ನೀಡಿ ಶೀಘ್ರಗತಿಯಲ್ಲಿ ಗುಣಮುಖರಾಗುವಂತೆ ಹಾರೈಸಿದ್ದರು. 

- Advertisement -

ನಾನು ಚಿಕ್ಕವಳಿದ್ದಾಗಿನಿಂದಲೂ ಸಹಾಯ ಮಾಡುವ ಮನೋಭಾವ ಬೆಳೆದುಕೊಂಡು ಬಂದಿದೆ. ನನ್ನ ಪೋಷಕರು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಹೇಳಿಕೊಂಡಿಲ್ಲ. ಅವರ ಹೇಳಿಕೊಟ್ಟಂತೆಯೇ ನಾನು ನಡೆದುಕೊಂಡು ಬರುತ್ತಿದ್ದೇನೆ. ಪ್ರೀತಿ ಹಾಗೂ ಸೇವಾ ಮನೋಭಾವ ಜನರ ಮನಸ್ಸನ್ನು ಗೆಲ್ಲಲಿದೆ ಎಂದು ಶಾರದಮ್ಮ ಅವರು ಹೇಳಿದ್ದಾರೆ. 

ಶಾರದಮ್ಮ ಅವರ ಉದಾರತೆಯ ಗುಣವನ್ನು ತಹಶೀಲ್ದಾರ್ ಸೇರಿದಂತೆ ಹಲವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಶಾರದಮ್ಮ ಅವರು ಇತರರಿಗೆ ಮಾದರಿಯಾಗಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ಇತರರೂ ಕೂಡ ನೆರವು ನೀಡಬೇಕು ಎಂದವರು ಹೇಳಿದ್ದಾರೆ.

Join Whatsapp