ಪೆಗಸಾಸ್ ಬೇಹುಗಾರಿಕೆ: ಕೇಂದ್ರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

Prasthutha|

ಬೆಂಗಳೂರು, ಜು 20 ; ಸಂವಿಧಾನದ ಪ್ರಮುಖ ಅಂಗ ಸಂಸ್ಥೆ ನ್ಯಾಯಾಂಗ, ನಾಲ್ಕನೇ ಆಯಾಮವಾಗಿರುವ ಪತ್ರಕರ್ತರು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರತಿಪಕ್ಷ ನಾಯಕರ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

- Advertisement -

ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಪೆಗಸಾಸ್ ಬೇಹುಗಾರಿಕೆ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಪಿ.ವೈ.ಸಿ.ಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದಿನದಲ್ಲಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದು, ಇಷ್ಟೂ ಸಮಯ ಬೇಹುಗಾರಿಕೆಗಾಗಿಯೇ ತಮ್ಮ ಸಮಯ ಮೀಸಲಿರಿಸಿದ್ದಾರೆ. ಜನೋಪಯೋಗಿ ಕೆಲಸಗಳನ್ನು ಮಾಡುತ್ತಿಲ್ಲ. ಸಾಮಾನ್ಯ ಜನರ ಬಗ್ಗೆ ಕನಿಷ್ಠ ಗಮನವನ್ನೇ ಹರಿಸುತ್ತಿಲ್ಲ ಎಂದು ಆರೋಪಿಸಿದರು.

- Advertisement -

ನರೇಂದ್ರ ಮೋದಿ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ. ನ್ಯಾಯಾಂಗ, ಪತ್ರಕರ್ತರು, ಪ್ರತಿಪಕ್ಷದ ನಾಯಕರ ಮೇಲೆ ಬೇಹುಗಾರಿಕೆ ಮಾಡುತ್ತಿರುವುದು ಖಂಡನೀಯ. ಬಿಜೆಪಿ ಸರ್ಕಾರದ ವಿರುದ್ಧ ಇರುವವರನ್ನು ಗುರಿಯಾಗಿಸಿಕೊಂಡು ಹತ್ತಿಕ್ಕುವ ಪ್ರವೃತ್ತಿ ವಿರುದ್ಧ ನಮ್ಮ ಹೋರಾಟ ತೀವ್ರಗೊಳ್ಳಲಿದೆ. ಈ ಪ್ರಜಾತಂತ್ರ ವಿರೋಧಿ ಧೋರಣೆ ವಿರುದ್ಧ ಯುವ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದರು.

ಮೋದಿ ಸರ್ಕಾರದ ವಿರುದ್ಧ ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಸಂಸತ್ ಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಈ ಬಗ್ಗೆ ಪಕ್ಷದ ಮುಖಂಡರ ಜತೆ ಚರ್ಚಿಸಿ ಮುಂದಿನ ಹೋರಾಟದ ದಿನಾಂಕ ಮತ್ತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಸುರಭಿ ದ್ವಿವೇದಿ ಮಾತನಾಡಿ, ದೇಶದ ಜನತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಕೋವಿಡ್ ಸಂಕಷ್ಟದಿಂದ ದಿನನಿತ್ಯ ಸಾಯುತ್ತಿದ್ದಾರೆ. ಆದರೆ ನಮ್ಮ ಪ್ರಧಾನಿ ಇದ್ಯಾವುದರ ಪರಿವೆಯೇ ಇಲ್ಲದೇ ಬೇಹುಗಾರಿಕೆಯಲ್ಲಿ ನಿರತರಾಗಿದ್ದಾರೆ. ಚುನಾವಣಾ ಆಯುಕ್ತರು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೇರಿ ತಮ್ಮ ವಿರುದ್ಧ ಇರುವವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದು, ಇದರ ವಿರುದ್ಧ ನಮ್ಮ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಅನಿಲ್ ಕುಮಾರ್ ಯಾದವ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.



Join Whatsapp