ಬೆಂಗಳೂರು: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಕೊಲೆಗೈದ ಪಾಗಲ್ ಪ್ರೇಮಿ ಪವನ್ ಕಲ್ಯಾಣ್, ವಿವಾಹಕ್ಕೆ ಒಪ್ಪದಿದ್ದರಿಂದ ಆಕೆಯನ್ನು ಕೊಲೆಗೈದಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
ವಿದ್ಯಾರ್ಥಿನಿ ಲಯಸ್ಮಿತಾ ಕೂಡಲೇ ಮದುವೆಯಾಗಲು ಒಪ್ಪದೇ ಇದ್ದಿದ್ದಕ್ಕೆ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ.
ಕಳೆದ ಒಂದೂವರೆ ವರ್ಷದಿಂದ ನಾನು ಲಯಸ್ಮಿತಾ ಪ್ರೀತಿಸುತ್ತಿದ್ದೆವು. ದೂರದ ಸಂಬಂಧಿಯಾಗಿದ್ದರಿಂದ ಜಾತಿಯ ಸಮಸ್ಯೆ ಇರಲಿಲ್ಲ. ಕುಟುಂಬಸ್ಥರನ್ನು ಒಪ್ಪಿಸುವ ಜವಾಬ್ದಾರಿಯನ್ನು ಲಯ ತೆಗೆದುಕೊಂಡಿದ್ದಳು. ಆದರೆ ಕಾಲೇಜಿಗೆ ಸೇರಿದ ಮೇಲೆ ಲಯಾಳ ವರ್ತನೆ ಬದಲಾಗಿತ್ತು. ಲಯಾಳ ಬದಲಾವಣೆ ನನಗೆ ಅನುಮಾನ ಬಂದು ತಕ್ಷಣ ಮದುವೆಯಾಗಲು ಕೇಳಿದೆ.
ಮದುವೆ ಎಂದ ಕೂಡಲೇ ವಿರೋಧಿಸಲು ಪ್ರಾರಂಭಿಸಿದಳು. ನಾನು ಈಗಿನ್ನೂ ಕಾಲೇಜಿಗೆ ಸೇರಿದ್ದೇನೆ, ಕಾಲೇಜು ಮುಗಿದ ಮೇಲೆ ಮದುವೆ ಆಗೋಣ ಎಂದ ಅಕೆ. ಎರಡು ದಿನ ಮಾತನಾಡಲೇ ಇಲ್ಲ, ಡಿಸೆಂಬರ್ 31 ಮತ್ತು ಜನವರಿ 1 ರಂದು ಫೋನ್ ರಿಸೀವ್ ಮಾಡಲಿಲ್ಲ. ನಮ್ಮಿಬ್ಬರ ವಿಚಾರ ಎಲ್ಲರಿಗೂ ಗೊತ್ತಾಗಲಿ ಎಂದು ವಾಟ್ಸಪ್ ಡಿಪಿ ಹಾಕಿದೆ. ಆಗ ಫೋನ್ ಮಾಡಿ ಬೈಯ್ದಳು. ಬಳಿಕ ನಾನು ಕಾಲೇಜಿಗೆ ಹೋಗಲು ತೀರ್ಮಾನ ಮಾಡಿದೆ. ಲಯಾಳ ಕಾಲೇಜಿನ ಬಳಿ ಹೋಗಿ ಅವಳನ್ನು ಹೊರಗೆ ಬರಲು ಹೇಳಿದೆ.
ಕಾಲೇಜಿನ ಹೊರಗೆ ಬಂದ ಕೂಡಲೇ ಮದುವೆ ಮಾಡಿಕೊಳ್ಳಲು ಕೇಳಿಕೊಂಡೆ. ಅವಳು ಜಗಳ ಶುರು ಮಾಡಿದಳು. ನನಗೂ ಆ ಸಂದರ್ಭದಲ್ಲಿ ಕೋಪ ಬಂತು. ನಾನು ಮೊದಲೇ ನಿರ್ಧರಿಸಿದಂತೆ ಅವಳನ್ನು ಕೊಲೆ ಮಾಡಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಇರಲಿಲ್ಲ. ಅವಳು ಸತ್ತ ಬಳಿಕ ನಾನು ಚಾಕುವಿನಿಂದ ಕುಯ್ದುಕೊಂಡೆ ಎಂದು ಪೊಲೀಸರ ಮುಂದೆ ಪವನ್ ತಪ್ಪೊಪ್ಪಿಕೊಂಡಿದ್ದಾನೆ